ನಿಗದಿತ ದಿನದಂದೇ ಸಾಹಿತ್ಯ ಸಮ್ಮೇಳನ

web
Published on

ಚಿಕ್ಕಮಗಳೂರು: ಸರ್ಕಾರದ ಅಸಹಕಾರದ ನಡುವೆಯೂ ಕನ್ನಡ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಶೃಂಗೇರಿಯಲ್ಲಿ ಜ.10 ಮತ್ತು 11ರಂದೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಸ್ಪಷ್ಟಪಡಿಸಿದರು.

ಸಮ್ಮೇಳನಕ್ಕೆ ಸಹಕಾರ ಕೋರಿ ಶೃಂಗೇರಿಯಲ್ಲಿ ಜ.9ರಂದು ನಿರಶನ ಕೈಗೊಳ್ಳುತ್ತೇನೆ. ಒಂದು ವೇಳೆ ಜಿಲ್ಲಾಡಳಿತ ಅಡ್ಡಿ ಮಾಡಿದರೆ ನಿರಶನ ಮುಂದುವರಿಸುತ್ತೇನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈವರೆಗೂ ಮೆರವಣಿಗೆಗೆ ಅನುಮತಿ ನೀಡಿಲ್ಲ. ಸಮ್ಮೇಳನಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದರೂ ನಿರಾಕರಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲಾ ಸಮ್ಮೇಳನಕ್ಕೆ ಬಂದೋಬಸ್ತ್ ಕಲ್ಪಿಸುವಂತೆ ಲಿಖಿತ ಅರ್ಜಿ ನೀಡಲು ಹೋದರೂ ಪೊಲೀಸ್ ವರಿಷ್ಠಾಧಿಕಾರಿ ಸ್ವೀಕರಿಸಿಲ್ಲ. ಹಾಗಾಗಿ ರಕ್ಷಣೆ ಒದಗಿಸುವಂತೆ ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ವಲಯ ಐಜಿಪಿ, ಪೊಲೀಸ್ ಮಹಾನಿರ್ದೇಶಕರಿಗೆ ಅಂಚೆ ಮೂಲಕ ಮನವಿ ಸಲ್ಲಿಸಸಲಾಗಿದೆ ಎಂದರು.

ಸಮ್ಮೇಳನ ಅಧ್ಯಕ್ಷರನ್ನಾಗಿ ಪರಿಸರ ಹೋರಾಟಗಾರ, ಸಾಹಿತಿ ಶೃಂಗೇರಿಯ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರನ್ನು ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಸರ್ವಸಮ್ಮತವಾಗಿ ಆಯ್ಕೆ ಮಾಡಿದ್ದಾರೆ. ಇವರ ಆಯ್ಕೆಯನ್ನು ಕೆಲವರು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದಾರೆ. ವಿರೋಧ ಎಲ್ಲ ಕಾಲಕ್ಕೂ ಹಾಗೂ ಯಾರನ್ನೂ ಆಯ್ಕೆ ಮಾಡಿದರೂ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಸಹಾಯಧನ ಇಲ್ಲದೆ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೆ ಸ್ವಾಗತ ಸಮಿತಿ ಬ್ಯಾಂಕ್ ಖಾತೆಗೆ 1.50 ಲಕ್ಷ ರೂ.ಗೂ ಅಧಿಕ ಹಣವನ್ನು ಸಾಹಿತ್ಯಾಭಿಮಾನಿಗಳು ಸಂದಾಯ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಮ್ಮೇಳನಕ್ಕೆ ಹಣ ನೀಡುವಂತೆ ಹಲವರು ಮನವಿ ಮಾಡುತ್ತಿದ್ದಾರೆ. ವಿವಾದಕ್ಕೆ ಆಸ್ಪದ ಇಲ್ಲದೆ ಸಮ್ಮೇಳನ ನಡೆಯಲು ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಸಾಹಿತ್ಯ ಬೆಸೆಯುವ ಕೆಲಸ ಮಾಡುತ್ತದೆ. ಅದು ಕೆಡವುವ ಕಾರ್ಯ ಮಾಡುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಸ್ವಾಯುತ್ತ ಸಂಸ್ಥೆ. ಸರ್ಕಾರದ ಈ ರೀತಿಯ ಹಸ್ತಕ್ಷೇಪ ಸಲ್ಲ. ಇದನ್ನು ಹಲವು ಸಾಹಿತಿಗಳು ಖಂಡಿಸಿದ್ದಾರೆ. ಸಮ್ಮೇಳನದ ಸಮಾರೋಪದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸಚಿವರನ್ನು ಆಹ್ವಾನಿಸುವ ನಿಯಮವಿಲ್ಲ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವರನ್ನು ಆಹ್ವಾನಿಸಬೇಕೆಂಬ ನಿಯಮವಿಲ್ಲ. ಸರ್ಕಾರದ ಅನುದಾನ ಪಡೆಯುತ್ತಿದ್ದರಿಂದ ಸಂಪ್ರದಾಯದಂತೆ ಅವರನ್ನು ಆಹ್ವಾನಿಸಲಾಗಿದೆ ಎಂದು ಕುಂದೂರು ಅಶೋಕ್ ಹೇಳಿದರು. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ತಡೆಯುವಂತೆ ಕಸಾಪ ರಾಜ್ಯ ಘಟಕಕ್ಕೆ ಸಲಹೆ ನೀಡಿದ್ದಾರೆ. ರಾಜ್ಯಾಧ್ಯಕ್ಷರು ಅನುದಾನ ಕೋರಿದರೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸು ಪತ್ರ ತರುವಂತೆ ಕೇಳಿದ್ದಾರೆ. ಇಂಥ ಸಂಪ್ರದಾಯ ಕಸಾಪದಲ್ಲಿ ಇಲ್ಲ ಎಂದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ, ಕೆ.ಜಿ.ಶ್ರೀನಿವಾಸಮೂರ್ತಿ, ಜಗದೀಶ್ ಸುದ್ದಿಗೊಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net