

ರಬಕವಿ/ಬನಹಟ್ಟಿ: ಯಾವುದೇ ಜಾತಿ, ವರ್ಗ, ವರ್ಣ ಬೇಧವಿಲ್ಲದೆ ಸಮಾಜದ ಎಲ್ಲ ಜನರಿಗೂ ಒಳಿತಾಗುವ ದೃಷ್ಠಿಯಿಂದ ಸಮಾಜದ ಏಳಿಗೆಯೊಂದಿಗೆ ಶಿಕ್ಷಣ ಒದಗಿಸುವತ್ತ ಮುಖ್ಯವಾಗಿ ಅನ್ನದಾಸೋಹ ಮಾಡುತ್ತಿರುವ ಬಂಡಿಗಣಿಯ ನೀಲಮಾಣಿಕ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳ ಕಾರ್ಯ ಅಪ್ರತಿಮವಾದುದು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಂಡಿಗಣಿಯ ನೀಲಮಾಣಿಕ ಮಠದಲ್ಲಿ ಸೋಮವಾರ ರಾಜ್ಯೋತ್ಸವ ನಿಮಿತ್ತ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನ್ನದಾನೇಶ್ವರ ಶ್ರೀಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮನುಷ್ಯನಾಗಿ ಜನ್ಮ ಪಡೆಯುವುದು ಅಪರೂಪ. ಮೋಕ್ಷ ಪಡೆಯುವ ಇಚ್ಛೆ ಹೊಂದುವುದು ಅಪರೂಪ. ಮೋಕ್ಷದ ಮಾರ್ಗ ತೋರಿಸುವ ಸಮರ್ಥ ಸದ್ಗುರು ದೊರಕುವುದೂ ಇನ್ನೂ ಅಪರೂಪ. ಈ ಮೂರೂ ಅಪರೂಪದ ಯೋಗಗಳನ್ನು ಪಡೆಯುತ್ತಿರುವ ಭಕ್ತರ ಭಾಗ್ಯವೆಂದರು.
ದಾಸೋಹದ ಮೂಲಕ ಚಕ್ರವರ್ತಿಯಾಗಿ ರಾಜ್ಯವಷ್ಟೇಯಲ್ಲದೆ, ನೆರೆಯ ರಾಜ್ಯಗಳಲ್ಲಿಯೂ ಅನ್ನ ದಾಸೋಹ ಮೂಲಕ ಸೈ ಎನ್ನಿಸಿಕೊಂಡಿರುವ ಅನ್ನದಾನೇಶ್ವರ ಶ್ರೀಗಳ ಕಾರ್ಯ ವಿಶ್ವವ್ಯಾಪ್ತಿ ಹರಡಲೆಂದು ಶ್ರೀಶೈಲ ಶ್ರೀಗಳು ಹಾರೈಸಿದರು.
ಅನ್ನದಾನೇಶ್ವರ ಶ್ರೀಗಳು ದಾಸೋಹವಿಲ್ಲದೆ ಕಾಯಕವಾಗದು, ಕಾಯಕ- ದಾಸೋಹಗಳ ಜತೆಗೆ ಸೇರುವ ಇನ್ನೊಂದು ತತ್ವ ಪ್ರಸಾದ-ವ್ಯಾವಹಾರಿಕ ಅರ್ಥದಲ್ಲಿ ಊಟ. ಸತ್ಯ ಶುದ್ಧ ಕಾಯಕದಿಂದ ಸಮಾಜದ ಶ್ರೇಯಸ್ಸಿಗೆ ದಾಸೋಹದ ಮೂಲಕ ಬಳಸಿದಾಗ ತಾನುಣ್ಣುವ ಊಟ ಪ್ರಸಾದ ಎಂದರು.
ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ. ಶ್ರೀ ವಿಶ್ವಪ್ರಭುದೇವ ಮಹಾಸ್ವಾಮಿಗಳು, ಜಮಖಂಡಿ ಮುತ್ತಿನಕಂತಿಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು, ಬಾವಲತ್ತಿ ಶ್ರೀಗಳು, ಶಿವಾನಂದ ಹಿರೇಮಠ ಇದ್ದರು. ಅಂದಾಜು 10 ಸಾವಿರಕ್ಕೂ ಅಧಿಕ ಭಕ್ತರು ನೆರೆದಿದ್ದು ವಿಶೇಷವಾಗಿತ್ತು.