ಗೋಕರ್ಣದಲ್ಲಿ ಬಂಡಿ ಉತ್ಸವ ಸಂಭ್ರಮ

gkn bandi meravanige
Published on

ಗೋಕರ್ಣ: ಪ್ರತಿ ವರ್ಷ 8 ದಿನ ಆಯೋಜಿತವಾಗುವ ಶ್ರೀಕ್ಷೇತ್ರ ಗೋಕರ್ಣದ ಗ್ರಾಮದೇವತೆ ಶ್ರೀಭದ್ರಕಾಳಿ ದೇವಿಯ ಪಾರಂಪರಿಕ ಬಂಡಿ ಹಬ್ಬದ ಪ್ರಧಾನ ವಿಧಿಯಾದ ಬಂಡಿ ಮೆರವಣಿಗೆ ಮಂಗಳವಾರ ಸಂಜೆ ಸಂಭ್ರಮದಿಂದ ನಡೆಯಿತು.

ಇಲ್ಲಿನ ರಥಬೀದಿಯ ಕಳಸದ ಮನೆಯಿಂದ ಶ್ರೀ ಭದ್ರಕಾಳಿ ಮಂದಿರದವರೆಗಿನ ಎರಡು ಕಿಮೀ ಉದ್ದದ ಮುಖ್ಯ ರಸ್ತೆಯಲ್ಲಿ ಕಿಕ್ಕಿರಿದು ನೆರೆದಿದ್ದ ಅಪಾರ ಭಕ್ತರು ಶ್ರೀದೇವಿಯ ಬಂಡಿಯನ್ನು ಎಳೆದು ಕೃತಾರ್ಥರಾದರು.

ಸಂಜೆ 6 ಗಂಟೆ ವೇಳೆಗೆ ಪ್ರಧಾನ ಪೂಜಾರಿ ವಿನಾಯಕ ಗುನಗ ಮತ್ತಿತರರ ನೇತೃತ್ವದಲ್ಲಿ ಶ್ರೀ ಭದ್ರಕಾಳಿ ಮಂದಿರದಿಂದ ವಿವಿಧ ಮಂಗಳವಾದ್ಯ ಮತ್ತು ಸಾವಿರಾರು ಭಕ್ತರೊಂದಿಗೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀದೇವಿಯ ಕಳಸ ರಥಬೀದಿಯಲ್ಲಿರುವ ಕಳಸದಮನೆಗೆ ಆಗಮಿಸಿತು. ಅಲ್ಲಿ ಶ್ರೀದೇವಿಗೆ ಫಲ ಸಮರ್ಪಿಸಿ ಮಹಾಮಂಗಳಾರತಿ ಬೆಳಗಿದ ನಂತರ ಕಳಸ ಮೆರವಣಿಗೆ ಆತ್ಮಲಿಂಗ ಸನ್ನಿಧಿ ಶ್ರೀಮಹಾಬಲೇಶ್ವರ ದರ್ಶನ ಮಾಡಿ ತಿರುಗಿ ಕಳಸದ ಮನೆಗೆ ಬಂದ ತರುವಾಯ ಬಂಡಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಬಂಡಿಯನ್ನು ಮುಂದೆ ಮಾಡಿಕೊಂಡು ಶ್ರೀದೇವಿಯ ಕಳಸ ಶ್ರೀ ಭದ್ರಕಾಳಿ ಮಂದಿರಕ್ಕೆ ಭವ್ಯ ಉತ್ಸವದೊಂದಿಗೆ ಸಾಗಿತು. ಶ್ರೀ ಭದ್ರಕಾಳಿ ಕಳಸದ ಉತ್ಸವದ ಜತೆಗೆ ತಲೆಯ ಮೇಲೆ ಕಲಶವನ್ನು ಹೊತ್ತು ಪುಷ್ಪಾಲಂಕೃತರಾದ ನೂರಾರು ಸುಮಂಗಲೆ ಬಾಗಿನಗಿತ್ತಿಯರು ನಡೆದು ಸಾಗಿ ತಮ್ಮ ವಾರ್ಷಿಕ ಹರಕೆ ಸಮರ್ಪಿಸಿದರು.

ಫಲಾವಳಿ ಮತ್ತು ಧನ ಸಮರ್ಪಣೆ: ಕಳಸದಮನೆ ಎದುರು ಸಿದ್ಧಗೊಂಡು ನಿಂತ ಶ್ರೀದೇವಿಯ ಬಂಡಿಗೆ ಭಕ್ತರು ಬೆಳಗ್ಗೆಯಿಂದ ನೂರಾರು ಟನ್ ತೂಕದ ತೆಂಗು, ಬಾಳೆ, ಹಲಸು, ಮಾವು ಮತ್ತಿತರ ಬಗೆ ಬಗೆಯ ಫಲಗಳನ್ನು ಮತ್ತು ನೋಟಿನ ಸರ ಮಾಲೆಗಳನ್ನು ಕಟ್ಟಿ ಅಲಂಕಾರ ಮಾಡಿ ಫಲ ಹಾಗೂ ಧನ ಕಾಣಿಕೆ ಸಮರ್ಪಿಸಿದರು. ಶ್ರೀದೇವಿಯ ಬಂಡಿ ಸಾಗುವುದನ್ನು ವೀಕ್ಷಿಸಲು ವಿವಿಧೆಡೆಗಳಿಂದ ಆಗಮಿಸಿದ 10 ಸಾವಿರಕ್ಕೂ ಹೆಚ್ಚಿನ ಭಕ್ತರು ಮುಖ್ಯ ರಸ್ತೆ ಮತ್ತು ಮನೆ ಮನೆಗಳಲ್ಲಿ ಸೇರಿದ್ದರು. ಬಂಡಿ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸರು ಮುಖ್ಯ ರಸ್ತೆಯ ಮೇಲಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಿ ಇನ್ನೊಂದು ಬದಿಯ ಏಕಮುಖ ರಸ್ತೆಯಿಂದ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದರು. ಸಂಜೆ ಏಳೂವರೆ ಗಂಟೆ ಸುಮಾರಿಗೆ ಬಂಡಿ ಉತ್ಸವವು ಭದ್ರಕಾಳಿ ಮಂದಿರ ತಲುಪಿತು. ಮಂದಿರದಲ್ಲಿ ಶ್ರೀದೇವಿಯ ಕಳಸಕ್ಕೆ ವಿವಿಧ ಸೇವೆ ಮತ್ತು ಮಹಾಮಂಗಳಾರತಿ ಕೈಗೊಂಡು ಬಳಿಕ ರಾತ್ರಿ ಶ್ರೀ ದೇವಿಯ ಕಳಸ ತಿರುಗಿ ಕಳಸದ ಮನೆಗೆ ಬಂದು ಸೇರಿತು.

ಹರಕೆ ಇಂದು: ಬಂಡಿಹಬ್ಬದ ಕೊನೇ ದಿನವಾದ ಮೇ 7ರಂದು ಸಂಜೆ ಶ್ರೀದೇವಿ ಕಳಸ ಭದ್ರಕಾಳಿ ಮಂದಿರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಭಕ್ತರು ತಾವು ಹೇಳಿಕೆ ಮಾಡಿಕೊಂಡ ಹರಕೆ ಮತ್ತು ಕಾಣಿಕೆಯನ್ನು ಸಮರ್ಪಿಸಲಿದ್ದಾರೆ. ಈ ಹರಕೆ ಅರ್ಪಣೆಯೊಂದಿಗೆ ವಾರ್ಷಿಕ ಬಂಡಿಹಬ್ಬ ಸಂಪನ್ನವಾಗುವುದು. ಇದರ ನಂತರ ಸ್ಥಳೀಯ ಪದ್ಧತಿಯಂತೆ ಮೇ 18ರಂದು ಒಂದು ದಿನದ ಶ್ರೀದೇವಿಯ ಮರುಬಂಡಿಹಬ್ಬ ಆಯೋಜಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net