

ಮಡಿಕೇರಿ: ಕೊಡಗಿನ ವೀರ ಸೇನಾನಿಗಳನ್ನು ಅಪಮಾನ ಮಾಡಿದ ವಕೀಲನನ್ನು ಕೊಡಗಿನಿಂದ ೬ ತಿಂಗಳ ಕಾಲ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸರ್ವಜನಾಂಗದ ಒಕ್ಕೂಟ ವತಿಯಿಂದ ಡಿ.೧೨ ರಂದು ಹಮ್ಮಿಕೊಂಡಿರುವ ಕೊಡಗು ಬಂದ್‌ಗೆ ವಿವಿಧ ಸಂಘಟನೆಗಳು, ಕೊಡಗು ಬಂದ್‌ಗೆ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್, ಕೊಡವ ಸಮಾಜಗಳು, ಗೋಣಿಕೊಪ್ಪಲು ಕಾವೇರಿ ಪೊಮ್ಮಕ್ಕಡ ಕೂಟ ಬೆಂಬಲ ನೀಡಿದೆ.
ನಾಪೋಕ್ಲು ಕೊಡವ ಸಮಾಜ ಬೆಂಬಲ: ಆರು ಗಂಟೆಗಳ ಕೊಡಗು ಬಂದ್‌ಗೆ ನಾಪೋಕ್ಲು ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಸಿ.ನಾಣಯ್ಯ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಭಾರತ ಕಂಡ ಅಪ್ರತಿಮ ಸೇನಾಧಿಕಾರಿಗಳಾದ ಕೊಡಗಿನ ಹೆಮ್ಮೆಯ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಸುಳ್ಯ ಮೂಲದ, ವಕೀಲರೊಬ್ಬರನ್ನು ತಕ್ಷಣ ಗಡಿಪಾರು ಮಾಡಬೇಕು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗುರುವಾರ ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗಿನ ಕೊಡಗು ಬಂದ್‌ಗೆ ಕೊಡಗಿನ ಸರ್ವ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ. ಶಿಸ್ತು, ದಕ್ಷತೆ ಮತ್ತು ದೇಶಭಕ್ತಿಯ ಇಬ್ಬರು ವೀರಸೇನಾನಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ದೇಶದ ಜನರಿಗೆ ಮಾಡಿರುವ ದೊಡ್ಡ ಅಪಮಾನವಾಗಿದೆ. ಆದ್ದರಿಂದ ತಪ್ಪು ಮಾಡಿದ ಕಿಡಿಗೇಡಿಯ ಮೇಲೆ ಯಾವುದೇ ರೀತಿಯಲ್ಲಿ ಅನುಕಂಪ ತೋರದೆ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಲು ಗೃಹ ಇಲಾಖೆ ಮುಂದಾಗಬೇಕು ಎಂದು ಎಂ.ಸಿ.ನಾಣಯ್ಯ ಆಗ್ರಹಿಸಿದ್ದಾರೆ.
ರಿಕ್ರಿಯೇಷನ್ ಅಸೋಸಿಯೇಷನ್ ಬೆಂಬಲ: ಕೊಡಗು ಬಂದ್‌ಗೆ ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್‌ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಇಬ್ಬರು ವೀರ ಸೇನಾಧಿಕಾರಿಗಳನ್ನು ಅಪಮಾನಿಸಿರುವ ಪ್ರಕರಣ ಭಾರತೀಯ ಸೇನಾ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ. ಆದ್ದರಿಂದ ಇದನ್ನು ದೇಶದ್ರೋಹದ ಪ್ರಕರಣವೆಂದು ಪರಿಗಣಿಸಿ ಕಿಡಿಗೇಡಿಯನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.