

ಬಣಕಲ್: ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಬಣಕಲ್ ಕೊಟ್ಟಿಗೆಹಾರ ಸುತ್ತಮುತ್ತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಬಗ್ಗಸಗೋಡು, ಸಬ್ಬೇನಹಳ್ಳಿ, ಹೊರಟ್ಟಿ ಸೇರಿದಂತೆ ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು.
ಕೊಟ್ಟಿಗೆಹಾರದಲ್ಲಿ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಹೊರಟ್ಟಿ ರಘು ಮಾತನಾಡಿ, ಕಾವೇರಿ ನೀರು ನಮ್ಮ ಹಕ್ಕು. ನಾವು ಬಾಯಾರಿಕೊಂಡು ಇರುವಾಗ ಬೇರೆ ರಾಜ್ಯದವರ ಬಾಯಾರಿಕೆ ತಣಿಸಲು ಸಾಧ್ಯವಿಲ್ಲ. ನಮಗೆ ಕುಡಿಯಲು ಸಮರ್ಪಕ ನೀರಿದ್ದರೆ ಮಾತ್ರ ತಮಿಳುನಾಡಿಗೆ ನೀರು ಹಾಯಿಸಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಸೇನೆ, ಸ್ಥಳೀಯ ಆಟೋ ಸಂಘಟನೆಗಳು, ವರ್ತಕರ ಸಂಘ, ಗೆಳೆಯರ ಬಳಗ, ಬಣಕಲ್ ಪ್ರೆಂಡ್ಸ್ ಕ್ಲಬ್,ರೈತ ಸಂಘ ಹಾಗೂ ಮತ್ತಿತರ ಪ್ರಗತಿಪರ ಸಂಘಟನೆಗಳು, ರಾಜಕೀಯ ಸಂಘಟನೆಗಳು ಬಂದ್‌ಗೆ ಕೈಜೋಡಿಸಿದವು. ಕನ್ನಡ ಸೇನೆ ತಾಲೂಕು ಅಧ್ಯಕ್ಷ ಹೊರಟ್ಟಿ ರಘು, ಕಾರ್ಯದರ್ಶಿ ರಾಜು, ಕಸಾಪ ಹೋಬಳಿ ಅಧ್ಯಕ್ಷ ಟಿ.ಎಂ.ಆದರ್ಶ್ , ಕರವೇ ಬಣಕಲ್ ಹೋಬಳಿ ಅಧ್ಯಕ್ಷ ಯಾಕೂಬ್ ಇದ್ದರು.