

ಹುಬ್ಬಳ್ಳಿ: ಕೋಲ್ಕತ್ತದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಾಣಿಜ್ಯ ನಗರಿಯಲ್ಲಿ ಖಾಸಗಿ ವೈದ್ಯರು ಶನಿವಾರ ತಮ್ಮ ಕ್ಲಿನಿಕ್ ಬಂದ್‌ಗೊಳಿಸುವಲ್ಲಿ ಯಶಸ್ವಿಯಾದರು.
ನಗರದಲ್ಲಿ 800ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಸಾವಿರಾರು ಜನರು ಭಾರತೀಯ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿ ಶಾಖೆಯ ಸದಸ್ಯರಾಗಿದ್ದಾರೆ. ಇವರೆಲ್ಲರೂ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿದ್ದರು. ಪರಿಣಾಮ ದೂರದ ಊರಿನಿಂದ ಆಗಮಿಸಿದ್ದ ರೋಗಿಗಳು ಮತ್ತವರ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಬೇಕಾಯಿತು.
ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್), ಪಾಲಿಕೆ ವ್ಯಾಪ್ತಿಯ ಚಿಟಗುಪ್ಪಿ ಸೇರಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದರು. ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಬಂದ್ ಮಾಡುತ್ತಾರೆ ಎಂಬ ಸಂದೇಶ ಅರಿತು ಸರ್ಕಾರದ ಸೂಚನೆಯಂತೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
ತಹಸೀಲ್ದಾರ್‌ಗೆ ಮನವಿ: ಕೋಲ್ಕತ್ತದಲ್ಲಿ ವೈದ್ಯೆ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಹುಬ್ಬಳ್ಳಿ ಶಾಖೆ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ನಗರದ ತಹಸೀಲ್ದಾರ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ವೆಂಕಟೇಶ ಮೂಲಿಮನಿ ಮಾತನಾಡಿ, ವೈದ್ಯರು ಸೇವೆ ಮಾಡಲು ಭಯವಾಗುತ್ತಿದೆ. ಅದರಲ್ಲೂ ಮಹಿಳಾ ವೈದ್ಯರು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಮರಳುವುದು ದುಸ್ತರವಾಗುತ್ತಿದೆ. ಕೋಲ್ಕತ್ತ ಘಟನೆ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುವವರನ್ನು ಬೆಚ್ಚಿ ಬೀಳಿಸಿದೆ ಎಂದು ಅಳಲು ತೋಡಿಕೊಂಡರು.
ಕೋಲ್ಕತ್ತದಲ್ಲಿ ಹತ್ಯೆ ಮತ್ತು ಅತ್ಯಾಚಾರಕ್ಕೊಳಗಾದ ವೈದ್ಯೆ ವಿದ್ಯಾರ್ಥಿನಿಗೆ ಕೇಂದ್ರ ಸರ್ಕಾರ ನ್ಯಾಯ ಕೊಡಿಸಬೇಕು. ಇದಕ್ಕೆ ಕಾರಣವಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಡಾ. ಆನಂದ ವರ್ಮಾ, ಖಜಾಂಚಿ ಡಾ. ಶೀತಲ್ ಹಿರೇಗೌಡರ, ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಕಸ್ತೂರಿ ಡೋಣಿಮಠ, ಡಾ. ಪಿ.ವಿ. ಕಂಚಿ ಸೇರಿದಂತೆ ಬಹಳಷ್ಟು ವೈದ್ಯರು ಮಾತನಾಡಿ, ವೈದ್ಯೆ ವಿದ್ಯಾರ್ಥಿನಿ ಹತ್ಯೆ ಮಾಡಿದ ದುರುಳರನ್ನು ನೇಣುಗಂಬಕ್ಕೆ ಏರಿಸಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಕಲಗೌಡ ಪಾಟೀಲ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಭರವಸೆ ನೀಡಿದರು.
ಡಾ. ರಾಮಲಿಂಗಪ್ಪ ಅಂಟರತಾನಿ, ಡಾ.ಎಂ.ಸಿ. ಸಿಂಧೂರ, ಡಾ. ಸಚಿನ್ ರೇವಣಕರ, ಡಾ. ನಾರಾಯಣ ಹೆಬಸೂರ, ಡಾ. ಭಾರತಿ ಭಾವಿಕಟ್ಟಿ, ಡಾ. ಸಂಗೀತಾ ಅಂಟರತಾನಿ, , ಡಾ. ಮಿತಾಕ್ಷರಿ ಹೂಗಾರ, ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ರಾಘವೇಂದ್ರ ದೇಸಾಯಿ, ಡಾ. ಮಂಜುನಾಥ ನೇಕಾರ, ಡಾ. ಸುನೀಲ ಬಿರಾದಾರ, ಡಾ. ನಾಗರಾಜ ಸಾನು ಸೇರಿದಂತೆ ಇತರರು ಇದ್ದರು.
ಪ್ರತಿಭಟನೆಯಲ್ಲಿ ಐಎಂಎ ಹುಬ್ಬಳ್ಳಿ ವುಮೆನ್ ಡಾಕ್ಟರ್ಸ್ ವಿಂಗ್, ಶಸ್ತ್ರ ಚಿಕಿತ್ಸಕರ ಸಂಘ, ಭಾರತೀಯ ಚರ್ಮರೋಗ ತಜ್ಞರ ಸಂಘ, ಇನ್ನರ್‌ವೀಲ್ ಕ್ಲಬ್, ಕಿಮ್ಸ್ ಕಿರಿಯ ವೈದ್ಯರ ಸಂಘ, ರಾಜ್ಯ ಒಬಿಜಿ ವೈದ್ಯರ ಸಂಘ, ಮೆಡಿಕಲ್ ರೆಪ್ರೆಸೆಂಟಿಟಿವ್ ಸಂಘ, ಔಷಧ ಮಾರಾಟಗಾರರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.