ಶನಿವಾರಸಂತೆ ಭಾಗದಲ್ಲಿ ಬಂದ್ ಯಶಸ್ವಿ

ಶನಿವಾರಸಂತೆ ಭಾಗದಲ್ಲಿ ಬಂದ್ ಯಶಸ್ವಿ
Published on

ಶನಿವಾರಸಂತೆ: ಸಿ ಮತ್ತು ಡಿ ಲ್ಯಾಂಡ್ ಹಾಗೂ ಸೆಕ್ಷನ್ 4 ಮತ್ತು 5ರ ದುರಸ್ತಿ ವಿಳಂಬದ ವಿರುದ್ಧ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್‌ಗೆ ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ವರ್ತಕರ ಸಂಘ, ರೈತ ಹೋರಾಟ ಸಮಿತಿ ಸೇರಿದಂತೆ ರೈತರು, ಗ್ರಾಮಸ್ಥರು, ಸಾರ್ವಜನಿಕರು ಬಂದ್‌ಗೆ ಬೆಂಬಲ ನೀಡುವ ಮೂಲಕ ತಾಲೂಕು ಬಂದ್ ಯಶಸ್ವಿಗೊಳಿಸಿದರು.

ಪಟ್ಟಣದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಹೋಟೆಲ್, ಕ್ಯಾಂಟೀನ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕಾರ ನೀಡಿದರು. ಸರ್ಕಾರ ಶಾಲೆ, ಕಚೇರಿ, ಆಸ್ಪತ್ರೆ ಹೊರತುಪಡಿಸಿದಂತೆ ಖಾಸಗಿ ಶಾಲಾ- ಕಾಲೇಜು, ಖಾಸಗಿ ಸಂಸ್ಥೆ ಕಾರ್ಯನಿವರ್ಹಿಸದೆ ಬಂದ್‌ಗೆ ಸಹಕಾರ ನೀಡಿದವು. ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಶನಿವಾರಸಂತೆಯಿಂದ ಅರಕಲಗೂಡು, ಹಾಸನ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತಿತ್ತು. ಆದರೆ ಸೋಮವಾರಪೇಟೆ, ಕುಶಾಲನಗರ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತು. ಗೋಪಾಲಪುರ ಮತ್ತು ಗುಡುಗಳಲೆ ಜಂಕ್ಷನ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದನ್ನು, ಹೊರತುಪಡಿಸಿದಂತೆ ಜನರಿಲ್ಲದೆ ಬಿಕೋ ಎನ್ನುವಂತಿತ್ತು.

ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರೈತ ಹೋರಾಟ ಸಮಿತಿ ಪ್ರಮುಖರು, ರೈತರು, ವರ್ತಕರ ಸಂಘದ ಪ್ರಮುಖರು, ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಇದಕ್ಕೂ ಮೊದಲು ರೈತ ಹೋರಾಟಗಾರರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಇಲಾಖೆ ಸಿಬ್ಬಂದಿಯಿಂದಲೇ ಕಚೇರಿಗೆ ಬೀಗ ಹಾಕಿಸುವ ಮೂಲಕ ಪ್ರತಿಭಟನೆ ನಡೆಸಿದರು.

ನಂತರ ನಡೆದ ರೈತ ಹೋರಾಟ ಸಭೆಯಲ್ಲಿ ಮಾತನಾಡಿದ ತಾಪಂ ಮಾಜಿ ಸದಸ್ಯ ಬಿ.ಎಸ್.ಅನಂತ್‌ಕುಮಾರ್, ಕೇವಲ ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಅಷ್ಟೇ ಅಲ್ಲ ಪ್ರತಿಯೊಬ್ಬ ರೈತರಿಗೂ ಅನ್ಯಾಯವಾಗುತ್ತಿರುವ ಬಗ್ಗೆ ಪ್ರತಿಭಟಿಸಲು ಬಂದ್ ನಡೆಸಲಾಗಿದೆ. ಈ ನಿಟ್ಟಿನಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ ಎಂದರು.

ಶನಿವಾರಸಂತೆ ಗ್ರಾಪಂ ಸದಸ್ಯ ಎಸ್.ಎನ್.ರಘು ಮಾತನಾಡಿ, ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆ ಸುಖಾಸುಮ್ಮನೆ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರ ಜಮೀನನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ರೈತರ ನ್ಯಾಯಸಿಗುವ ತನಕ ರೈತ ಹೋರಾಟ ಮುಂದುವರಿಯಲಿದೆ ಎಂದರು.

ವರ್ತಕರ ಸಂಘದ ನಿರ್ದೇಶಕ ಸಿ.ಎಸ್.ಗಿರೀಶ್ ಮಾತನಾಡಿ, ಈ ಹೋರಾಟವು ಕೆಲವೇ ರೈತರಿಗೆ ಸೀಮಿತವಲ್ಲ. ಬದಲಿ ಎಲ್ಲರ ರೈತರ ಪರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಪ್ರತಿಯೊಬ್ಬ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಬೇಕಿದೆ ಎಂದರು.

ಸಭೆಯಲ್ಲಿ ಮುಖಂಡರಾದ ರಕ್ಷಿತ್, ಭರತ್, ವಿನೋದ್, ಪುನಿತ್ ತಾಳೂರು, ದಿವಾಕರ್. ಸುರೇಶ್, ಕೇಶವಮೂರ್ತಿ, ಸರ್ದಾರ್ ಆಹಮ್ಮದ್, ವೀರೇಂದ್ರಕುಮಾರ್, ಪ್ರಶಾಂತ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net