

ಬೆಳಗಾವಿಯಲ್ಲಿ ಸಾರಿಗೆ ಸಿಬ್ಬಂದಿ ಮೇಲೆ ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮೈಸೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಯಿತು.
ನಗರದಲ್ಲಿ ಅಂಗಡಿ, ಮುಂಗಟ್ಟು, ಶಾಲಾ-ಕಾಲೇಜು, ಹೋಟೆಲ್, ಮಾಲ್, ವಾಣಿಜ್ಯ ಮಳಿಗೆಗಳು ಎಂದಿನಂತೆ ತೆರೆದಿದ್ದರೆ, ಸಾರಿಗೆ ಸಂಸ್ಥೆಯ ಬಸ್‌ಗಳು, ಆಟೋ, ಟ್ಯಾಕ್ಸಿ ಮತ್ತು ಇತರ ವಾಹನಗಳು ರಸ್ತೆಗಿಳಿದಿದ್ದವು. ಜನಜೀವನ ಸಹಜವಾಗಿತ್ತಲ್ಲದೇ, ಯಾರೊಬ್ಬರಿಗೂ ಬಂದ್ ಬಿಸಿ ತಟ್ಟಲಿಲ್ಲ.
ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸೀಮಿತವಾದ ಬಂದ್: ಶನಿವಾರ ಮುಂಜಾನೆ ನಗರದಲ್ಲಿರುವ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಹಿರಿಯ ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ನೇತೃತ್ವದಲ್ಲಿ ಒಂದು ತಂಡ, ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಮತ್ತೊಂದು ತಂಡ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಬಸ್ ಸಂಚಾರ ತಡೆದು ಪ್ರತಿಭಟನೆಗೆ ಮುಂದಾದರು.
ನಿಮಗಾಗಿ ನಾವು ಬಂದ್ ಮಾಡುತ್ತಿದ್ದೇವೆ. ನೀವು ನೋಡಿದರೆ ಮರಾಠಿಗರಿಗೆ ಸಪೋರ್ಟ್ ಮಾಡಿ ಬಸ್ ಓಡಿಸುತ್ತಿದ್ದೀರಿ. ದಯವಿಟ್ಟು ಬಸ್ ಓಡಿಸುವುದನ್ನು ನಿಲ್ಲಿಸಿ ಎಂದು ಕನ್ನಡ ಪರ ಹೋರಾಟಗಾರರು ಬಸ್ ಚಾಲಕ ಮತ್ತು ನಿರ್ವಾಹಕರಲ್ಲಿ ಮನವಿ ಮಾಡಿದರು. ಆದರೂ ಬಸ್‌ಗಳು ಸಂಚಾರ ನಡೆಸಿದ್ದನ್ನು ಕಂಡು ಸಿಟ್ಟಿಗೆದ್ದ ಹೋರಾಟಗಾರರು ಕನ್ನಡ ಧ್ವಜಗಳನ್ನು ಹಿಡಿದು ನಿಲ್ದಾಣದಿಂದ ಬಸ್‌ಗಳು ಆಚೆ ಹೋಗದಂತೆ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.
ಸ್ಥಳದಲ್ಲಿದ್ದ ಪೊಲೀಸರು ಬಸ್ ತಡೆದು ಪ್ರತಿಭಟಿಸುತ್ತಿದ್ದ ಕನ್ನಡಪರ ಸಂಘಟನೆಯ ಮುಖಂಡರನ್ನು ವಶಕ್ಕೆ ಪಡೆದು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಕನ್ನಡ ಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ಹನುಮಂತರಾಜು ಸೇರಿದಂತೆ ಅನೇಕರು ಇದ್ದರು.
ಈ ವೇಳೆ ಸಾರಿಗೆ ಸಂಸ್ಥೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ನೆಲ, ಜಲ, ಭಾಷೆ, ಕನ್ನಡಿಗರಿಗೆ ರಕ್ಷಣೆ ವಿಷಯ ಬಂದಾಗ ಕನ್ನಡಿಗರು ಎದ್ದು ನಿಲ್ಲಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ: ಕರ್ನಾಟಕ ಬಂದ್ ಹಿನ್ನೆಲೆ ನಗರದ ಅಗ್ರಹಾರ ವೃತ್ತದಲ್ಲಿ ಕನ್ನಡ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಕೆಲಕಾಲ ಪ್ರತಿಭಟನೆ ನಡೆಸಿದ ಕನ್ನಡ ವೇದಿಕೆ ಕಾರ್ಯಕರ್ತರು, ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಈ ಸಂದರ್ಭ ವೇದಿಕೆ ಪ್ರಮುಖರಾದ ಬಾಲಕೃಷ್ಣ, ನಾಲಾಬೀದಿ ರವಿ ಸೇರಿದಂತೆ ಅನೇಕರು ಇದ್ದರು.
ಸಂಘ ಸಂಸ್ಥೆಗಳಿಂದ ಬಾಹ್ಯ, ನೈತಿಕ ಬೆಂಬಲ: ಕರ್ನಾಟಕ ಬಂದ್‌ಗೆ ಮೈಸೂರಿನ ಕೆಲವು ಸಂಘಟನೆಗಳು ಹೊರತುಪಡಿಸಿ ಉಳಿದ ಸಂಘ, ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಕೇವಲ ಬಾಹ್ಯ ಮತ್ತು ನೈತಿಕ ಬೆಂಬಲ ನೀಡಿದವು. ಸಂಪೂರ್ಣವಾಗಿ ಬಂದ್‌ಗೆ ಬೆಂಬಲ ಸಿಗದೆ ಇರುವುದರಿಂದ ಕನ್ನಡಪರ ಸಂಘಟನೆಗಳ ಹೋರಾಟ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಮೈಸೂರಿನ ರೈತ ಸಂಘಟನೆಗಳು, ಸ್ಥಳೀಯ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲವನ್ನಷ್ಟೇ ನೀಡಿದ್ದವು.
ಮಾರ್ಕೆಟ್ ಭಣಭಣ: ಸದಾ ಜನರಿಂದ ತುಂಬಿರುತ್ತಿದ್ದ ದೇವರಾಜ ಮಾರುಕಟ್ಟೆ, ಎಂ.ಜಿ.ರಸ್ತೆಯ ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳು ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ ಜನರಿಲ್ಲದೆ ಭಣಗುಟ್ಟಿದವು. ಬಳಿಕ ಮಧ್ಯಾಹ್ನದ ವೇಳೆಗೆ ಎಲ್ಲ ಕಡೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಜತೆಗೆ ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು.