

ರಟ್ಟಿಹಳ್ಳಿ: ಅಂತರ್ಜಲ ವೃದ್ಧಿ, ರೈತರ ಅನುಕೂಲಕ್ಕಾಗಿ ಸರ್ಕಾರ 3.82 ಕೋಟಿ ರೂ ವೆಚ್ಚದಲ್ಲಿ ನಿರ್ವಿುಸಿದ ಬಾಂದಾರ ಕಂ ಸೇತುವೆ ಭಾರಿ ವಾಹನಗಳ ಸಂಚಾರದಿಂದ ಅಪಾಯಕ್ಕೆ ಸಿಲುಕಿದೆ.
ತಾಲೂಕಿನ ತೋಟಗಂಟಿ ಮತ್ತು ರಟ್ಟಿಹಳ್ಳಿ ಪಟ್ಟಣದ ಮಧ್ಯೆ ಇರುವ ಕುಮದ್ವತಿ ನದಿಗೆ ಅಡ್ಡಲಾಗಿ 2023ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ ಕಂ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದರಿಂದ ಪಟ್ಟಣದಿಂದ ಕೇವಲ 1 ಕಿ.ಮೀ. ಅಂತರದಲ್ಲಿ ತೋಟಗಂಟಿ ಸೇರಿದಂತೆ ಈ ಭಾಗದಲ್ಲಿನ ಪರ್ವತ ಸಿದ್ದಗೇರಿ, ಜೋಕನಾಳ, ಕಣವಿಸಿದ್ದಗೇರಿ, ಹಳ್ಳಿಯಾಳ, ತಡಕನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ಅನುಕೂಲವಾಗಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಈ ಸೇತುವೆ ಮೇಲೆ ಪ್ರತಿನಿತ್ಯ ಭಾರಿ ಗಾತ್ರದ ವಾಹನಗಳ ಸಾಗಾಟ ಎಗ್ಗಿಲ್ಲದೆ ಸಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಬಾಂದರ ಕಿರಿದಾಗಿದ್ದು ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಕೇವಲ ಪಾದಚಾರಿಗಳು ಮತ್ತು ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಮಾತ್ರ ಅನುಕೂಲಕರವಾಗಿದೆ. ಭಾರಿ ಗಾತ್ರಗಳ ವಾಹನಗಳ ಸಂಚಾರಕ್ಕೆ ಬೇರೆ ಮಾರ್ಗವಿದ್ದರೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಇದೇ ಮಾರ್ಗದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿರುವುದು ಅಪಾಯಕ್ಕೆ ಅಹ್ವಾನ ನೀಡಿದಂತಾಗಿದೆ.
ರಟ್ಟಿಹಳ್ಳಿ ಮತ್ತು ತೋಟಗಂಟಿ ಸೇರಿದಂತೆ ಉಳಿದ ಅನೇಕ ಗ್ರಾಮಗಳಿಂದ ಮರಳು, ಕಲ್ಲು, ಮಣ್ಣು ಗಳನ್ನು ಸಾಗಿಸುವ ಭಾರಿ ವಾಹನಗಳು ಮೊದಲು ಲೋಕೋಪಯೋಗಿ ಇಲಾಖೆಯಿಂದ ನಿರ್ವಣವಾದ ಹಳೆಯ ರಸ್ತೆಯಲ್ಲಿ ಸುಮಾರು 34 ಕಿ.ಮೀ. ಸುತ್ತುವರಿದು ಸಂಚಾರ ನಡೆಸುತ್ತಿದ್ದವು. ಆದರೆ, ಈಗ ಬಾಂದಾರ ಕಂ ಸೇತುವೆ ನಿರ್ವಣವಾಗಿರುವುದರಿಂದ ಈ ಹೆಚ್ಚುವರಿ ಸುತ್ತಾಟ ತಪ್ಪಿಸುವ ಸಲುವಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ.
ಬಾಂದಾರ ಕಂ ಸೇತುವೆ ಕಿರಿದಾಗಿದ್ದು, ಇದಕ್ಕೆ ಯಾವುದೇ ರೀತಿಯ ತಡೆಗೋಡೆ ನಿರ್ವಿುಸಲಾಗಿಲ್ಲ. ಇದರಿಂದ ಇಲ್ಲಿ ಸಂಚರಿಸುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಉಂಟಾಗುವ ಸಾಧ್ಯತೆ ಇದೆ. ನಿತ್ಯ ಸಾರ್ವಜನಿಕರು, ಶಾಲೆ ಮಕ್ಕಳು ಸಂಚಾರ ಮಾಡುವ ಈ ಬಾಂದರದ ಮೇಲೆ ದೊಡ್ಡ ಗಾತ್ರದ ವಾಹನಗಳ ಸಂಚಾರವನ್ನು ನಿಷೇದಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಸೇತುವೆ ಪ್ರವೇಶ ಮಾರ್ಗದ ಬಳಿ ಭಾರಿ ವಾಹನಗಳನ್ನು ನಿರ್ಬಂಧಿಸುವ ಕಮಾನು ನಿರ್ವಣ, ಎಚ್ಚರಿಕೆ ಫಲಕ ಅಳವಡಿಕೆಯಂಥ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕಿದೆ.
ಬಾಂದಾರ ಸಹಿತ ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆ ನಿಮಾಣ ಮಾಡಲು ಸಾಧ್ಯವಿಲ್ಲ. ಪ್ರತೀ ಮಳೆಗಾಲದಲ್ಲಿ ಈ ಬಾಂದಾರ ಮುಳುಗಡೆಯಾಗುತ್ತದೆ. ಇದರಿಂದ ತಡೆಗೋಡೆಗೆ ಧಕ್ಕೆಯಾಗುತ್ತದೆ. ಬಾಂದರ ಸಹಿತ ಸೇತುವೆ ನಿಮಾಣ ಮಾಡಿರುವುದು ಸಣ್ಣಪುಟ್ಟ ಆಟೋ, ದ್ವಿಚಕ್ರ ವಾಹನಗಳು ಮತ್ತು ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಲಿ ಎಂದು. ದೊಡ್ಡ ಗಾತ್ರದ ವಾಹನಗಳ ಸಂಚಾರ ಕ್ರಮೇಣ ಬಾಂದರದ ಸುರಕ್ಷತೆಗೆ ಧಕ್ಕೆ ತರಲಿದೆ. ದೊಡ್ಡ ಗಾತ್ರದ ವಾಹನಗಳ ಸಂಚಾರ ನಿಷೇಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. | ಮನೋಹರ ಹಾದಿಮನಿ, ಸಹಾಯಕ ಇಂಜಿನಿಯರ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಹಾನಗಲ್. ಈ ಬಾಂದಾರ ಸಹಿತ ಸೇತುವೆಯಲ್ಲಿ ನಿತ್ಯ ದೊಡ್ಡ ಗಾತ್ರದ ವಾಹನಗಳ ಸಂಚಾರ ಸಾಮಾನ್ಯವಾಗಿದೆ, ಇದರಿಂದ ಬಾಂದಾರ ಸುರಕ್ಷತೆ ಮತ್ತು ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ದೊಡ್ಡ ಗಾತ್ರದ ವಾಹನಗಳ ಸಂಚಾರ ನಿಷೇಧಿಸಲು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು. | ಸಂದೀಪ ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷರು ರಟ್ಟಿಹಳ್ಳಿ