ನಾಳೆ ಕೊಪ್ಪಳ ಬಂದ್‌ಗೆ ಕರೆ

BAND TOMORROW DISTRICT KOPPAL CUAVERY WATER
BAND
Published on

ಕೊಪ್ಪಳ: ಕಾವೇರಿ ನದಿ ನೀರು ಹಾಗೂ ತುಂಗಭದ್ರಾ, ಸಿಂಗಟಾಲೂರು ಏತ ನೀರಾವರಿ ಸೇರಿ ಉಕ ಭಾಗದ ಪ್ರಮುಖ ನೀರಾವರಿ ಹೋರಾಟ ಅನುಷ್ಠಾನಕ್ಕೆ ಆಗ್ರಹಿಸಿ

ಸೆ.29ರಂದು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ರಾಜೇಶ ರಡ್ಡಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕಾವೇರಿ ಅಷ್ಟೇ ಅಲ್ಲದೇ ನಮ್ಮ ಜಿಲ್ಲೆ ಉಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲಾಗುವುದು. ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಗೇಟ್‌ನಲ್ಲಿ ಹೆದ್ದಾರಿ ತಡೆ ನಡೆಸುತ್ತೇವೆ.

ಜಿಲ್ಲೆಯಲ್ಲಿ ಎಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬರಲಾಗಿದೆ. 30ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ.

ಸಾರಿಗೆ ಬಸ್ ಸೇವೆ ನೀಡದಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ವರ್ತಕರು ಅಂಗಡಿ ಬಂದ್ ಮಾಡಿ ಬಂದ್ ಬೆಂಬಲಿಸಬೇಕು. ನಂತರ ಕೊಪ್ಪಳ ಬಸ್ ನಿಲ್ದಾಣದಿಂದ ಪಾದಯಾತ್ರೆ ಮೂಲಕ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದೆಂದರು.

ಉಕ ಭಾಗದ ಸಮಸ್ಯಗಳ ಕುರಿತು ದಕ್ಷಿಣ ಜಿಲ್ಲೆಗಳಲ್ಲಿ ಹೋರಾಟ ಮಾಡುವಂತೆ ನಮ್ಮ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದ್ದೇವೆ. ಮುಂದೆ ಸಮಸ್ಯೆಗಳಾದಲ್ಲಿ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ದಕ್ಷಿಣ ಜಿಲ್ಲೆಗಳ ಸಮಸ್ಯೆಗಳ ಕುರಿತು ಹೋರಾಟದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದೇವೆಂದು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಂಗಮೇಶ ಬಾದವಾಡಗಿ, ಕಸ್ತೂರಿ ಕರ್ನಾಟಕ ಜನಪರ ಸೇನೆ ಅಧ್ಯಕ್ಷ ಪ್ರಶಾಂತ ನಾಯಕ, ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net