

ಶಿರಸಿ: ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯ ಕದಂಬರ ಸಾಮ್ರಾಜ್ಯ, ಕಲೆ, ಸಂಸ್ಕೃತಿಯನ್ನು ನಾಡಿಗೆ ತಿಳಿಸುವ ಸಲುವಾಗಿ ಮಾ.5 ಮತ್ತು 6 ರಂದು ಹಮ್ಮಿಕೊಂಡಿರುವ ಕದಂಬೋತ್ಸವ ನಿಮಿತ್ತ ಉಪವಿಭಾಗಾಧಿಕಾರಿ ಅಪರ್ಣಾ ರಮೇಶ್ ಅವರು ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಮಾ. 5ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ಆರ್. ವಿ. ದೇಶಪಾಂಡೆ, ಸತೀಶ ಸೈಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ಅನಂತಕುಮಾರ ಹೆಗಡೆ, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯಿಷಾ ಖಾನ್ ಪಾಲ್ಗೊಳ್ಳುತ್ತಿದ್ದು, ಅಧ್ಯಕ್ಷತೆಯನ್ನು ಶಾಸಕ ಶಿವರಾಮ ಹೆಬ್ಬಾರ್ ವಹಿಸುವರು.
ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಗೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಭಕ್ತಿ ಗೀತೆ, ವಚನ ಸಂಗೀತ, ಭರತನಾಟ್ಯ, ಕಾಮಿಡಿ ಶೋ, ನೃತ್ಯ ವೈಭವ ಹಾಗೂ ರಾತ್ರಿ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾ. 6ರಂದು ಬೆಳಗ್ಗೆ ಕವಿಗೋಷ್ಠಿ, ಮಧ್ಯಾಹ್ನ ಇತಿಹಾಸ ಗೋಷ್ಠಿ ನಡೆಯಲಿದೆ. ಸಂಜೆ ನಡೆಯುವ ಸಮಾರೋಪದಲ್ಲಿ ಹಿರಿಯ ಸಾಹಿತಿ ಡಾ. ಝಮೀರುಲ್ಲಾ ಷರೀಫ, ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುತ್ತಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮ, ರಾತ್ರಿ ಹರಿಕೃಷ್ಣ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆಯ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಉಪತಹಸೀಲ್ದಾರ್ ರಮೇಶ ಹೆಗಡೆ, ಇಒ ಸತೀಶ ಹೆಗಡೆ, ಬಿ.ವಿ. ಗಣೇಶ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಕೃಷ್ಣ ಕಾಮ್ಕರ್ ಇತರರಿದ್ದರು.
ಸುತ್ತಮುತ್ತಲಿನ ತಾಲೂಕುಗಳಲ್ಲಿ ಕದಂಬೋತ್ಸವ ಪ್ರಚಾರಾರ್ಥವಾಗಿ ನಡೆಸುವ ಕದಂಬ ಜ್ಯೋತಿಯ ಮೆರವಣಿಗೆ ಮಾ. 3ರಿಂದ ಗುಡ್ನಾಪುರದಿಂದ ಆರಂಭಗೊಳ್ಳಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಲಿದ್ದಾರೆ. ಸಚಿವ ಮಂಕಾಳ ವೈದ್ಯ, ಶಾಸರು, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಇತರರು ಭಾಗಿಯಾಗಲಿದ್ದಾರೆ. ಅದೇ ದಿನ ಗುಡ್ನಾಪುರದ ರಾಣಿ ನಿವಾಸದ ಎದುರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 3 ಗಂಟೆಯಿಂದ ಬನವಾಸಿಯ ಜಯಂತಿ ಪ್ರೌಢ ಶಾಲೆ ಆವರಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕದಂಬೋತ್ಸವದ ಕ್ರೀಡೋತ್ಸವದಲ್ಲಿ ಪುರುಷರಿಗಾಗಿ ಹಗ್ಗ ಜಗ್ಗಾಟ, ಕಬಡ್ಡಿ, ಕೇರಂ, ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಸ್ಲೋ ಸೈಕಲ್, ತಲೆಮೇಲೆ ಪುಸ್ತಕ ಹೊತ್ತು ಸ್ಪರ್ಧೆ, ಲಿಂಬು ಚಮಚ, ಸ್ಲೋಸೈಕಲ್ ರೇಸ್, ಗೋಣಿ ಚೀಲ ರೇಸ್, ಕೇರಂ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮತ್ತು ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಜನ ಸೇವಾ ಕ್ರೀಡಾಧಿಕಾರಿಯನ್ನು ಸಂಪರ್ಕಿಸಬಹುದು.