ಅರಸೀಕೆರೆ ಗ್ರಾಮಾಂತರ : ತಾಲೂಕಿನ ಬಾಣಾವರದ ಕೋಟೆ ಬಡಾವಣೆಯಲ್ಲಿರುವ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ 30ರಂದು ನೆರವೇರಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ದೇಗುಲದಲ್ಲಿ ಈ ಬಾರಿ ನೂತನ ರಥವನ್ನು ಸಿದ್ಧಪಡಿಸಲಾಗಿದೆ. ರಥದ ಸುತ್ತ ಹನುಮಾನ್ ಚಾಲೀಸಾ ಕೆತ್ತನೆ ಮಾಡಿರುವುದು ಗಮನ ಸೆಳೆಯುತ್ತಿದೆ. ದಿವ್ಯ ರಥೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಶ್ರೀ ಗಣಪತಿ ಹೋಮ, ಆಂಜನೇಯ ಹೋಮ, ರಾಮ ತಾರಕ ಹೋಮ, ಬ್ರಹ್ಮ ಹೋಮ, ಹಾಗೂ ರುದ್ರ ಹೋಮವನ್ನು ನಡೆಸಲಾಯಿತುನೂತನ ರಥ ಸಾಂಗವಾಗಿ ಸಾಗಲು ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿ ಎಂದು ಪ್ರಾರ್ಥಿಸಿ ಶ್ರೀಆಂಜನೇಯ ಸ್ವಾಮಿಯವರ ರಥಾಂಗ ಹೋಮ, ರಥದ ಪ್ರತಿಷ್ಠಾಪನೆ ಮತ್ತು ಕಳಸಕ್ಕೆ ಅಭಿಷೇಕವೂ ಇದೇ ಸಂದರ್ಭ ವಿಧಿವತ್ತಾಗಿ ನೆರವೇರಿತು. ಅರ್ಚಕರಾದ ವೇದ ಬ್ರಹ್ಮ ಶ್ರೀ ಹರೀಶ ಭಟ್, ಸುಬ್ಬಾ ಭಟ್, ಶೇಷಾದ್ರಿ ಭಟ್ ನೇತೃತ್ವ ವಹಿಸಿದ್ದರು. ನೂರಾರು ಭಕ್ತರು ಹಾಜರಿದ್ದರು.