

ಗದಗ: ಇಲ್ಲಿನ ಪುರಾತನ ಹಳೇಬನಶಂಕರಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ವಿಶೇಷಪೂಜೆ, ಅಭಿಷೇಕ. ಅಲಂಕಾರ ಜರುಗಿತು. ನಂತರ ಕಳಸದ ಮೆರವಣಿಗೆಯು ಮಹಿಳೆಯರ ಕಳಸಾರತಿ ಹಾಗೂ ಮಂಗಳವಾದ್ಯಗಳೊಂದಿಗೆ ಹೊರಟು ಬೆಟಗೇರಿಯ ಕುರಹಟ್ಟಿಪೇಟೆ, ಗಾಗಿರ್ಪೇಟೆ, ಚನ್ನಗೌಡರ ಓಣಿ ಮೂಲಕ ಸಂಚರಿಸಿ ದೇವರ ದಾಸಿಮಯ್ಯನ ಮೂತಿರ್ಗೆ ಮಾಲಾರ್ಪಣೆ ಮಾಡಿದ ನಂತರ ದೇವಸ್ಥಾನಕ್ಕೆ ಮರಳಿ ಬಂದಿತು. ನಂತರ ಕಳಸಾರೋಹಣ ಜರುಗಿತು.
ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮಹಿಳೆಯರು, ಸಮಾಜ ಬಾಂಧವರು, ಮಹಿಳಾ ಮಂಡಳದ ಸರ್ವ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಭಾಗವಹಿಸಿದ್ದರು. ಮಹಾ ಮಂಗಳಾರತಿ ನೆರವೇರಿದ ನಂತರ ಪ್ರಸಾದವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.