

ಬೆಂಗಳೂರು: ನಗರದ ಬನಶಂಕರಿ ದೇವಸ್ಥಾನದಲ್ಲಿ ಗುರುವಾರದಿಂದ (ಜ.18ರಿಂದ 29ರವರೆಗೆ) ಹನ್ನೆರಡು ದಿನಗಳ ಕಾಲ ಶ್ರೀ ಬನಶಂಕರಿ ಅಮ್ಮನವರ 108ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ.
ಮಹೋತ್ಸವದಲ್ಲಿ ನಿತ್ಯ ಹೋಮ ಹವನಗಳು ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಮೊದಲ ದಿನವಾದ ಗುರುವಾರ ಸಂಜೆ 5 ಗಂಟೆಗೆ ಗಂಗಾಪೂಜೆ, ಮೂಲದೇವರ ಅನುಜ್ಞೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಕಲಶಸ್ಥಾಪನೆ, ವಾಸ್ತು ಹೋಮ, ಪ್ರಾಕಾರೋತ್ಸವ, ವಾಸ್ತುಬಲಿ, ಅಷ್ಟದಿಕ್ಪಾಲಕರ ಬಲಿ ನಡೆಯಲಿದೆ. 19ರಂದು ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ, 20ರಂದು ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪವಮಾನ ಹೋಮ ನಡೆಯಲಿದೆ. 21ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ಧನ್ವಂತರಿ ಹೋಮ ಆಯೋಜಿಸಲಾಗಿದೆ. 22ರಂದು ರುದ್ರಹೋಮ, ಸಂಜೆ 5ಕ್ಕೆ ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿಗೆ ಬಿಲ್ವಾರ್ಚನೆ ನಡೆಯಲಿದೆ.
ಉತ್ಸವದ 7ನೇ ದಿನ (ಜ.23) ಶ್ರೀ ದುರ್ಗಾ ಹೋಮ, ಶ್ರೀಸೂಕ್ತ ಹೋಮ, ಶ್ರೀ ಸಾರಸ್ವತ ಹೋಮ ನಡೆಯಲಿದೆ. ಸಂಜೆ 6.30ಕ್ಕೆ ದುರ್ಗಾದೀಪ ನಮಸ್ಕಾರ. 24ರಂದು ನವಚಂಡಿಕಾ ಹೋಮ, ಮೂಲ ದೇವರ ಸನ್ನಿಧಿಯಲ್ಲಿ ವಿಶೇಷ ಪಲ್ಯದ ಪೂಜೆ. 25ರಂದು ಬನದ ಹುಣ್ಣಿಮೆ ಅಂಗವಾಗಿ ಬೆಳಗ್ಗೆ 11.50ರಿಂದ 12.50ರವರೆಗೆ ರಥಾರೋಹಣ ನಡೆಯಲಿದೆ. ಸಂಜೆ 6ಕ್ಕೆ ಶಾಕಾಂಬರಿ ದೇವಿ ಅವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. 26ರಂದು ಶ್ರೀ ಲಲಿತಾ ಸಹಸ್ರನಾಮ ಹೋಮ, ಸಂಜೆ 7ಕ್ಕೆ ಶ್ರೀ ಶಾಕಾಂಬರಿ ದೇವಿಗೆ ವಿಶೇಷ ಉಯ್ಯಲೋತ್ಸವ, 27ರಂದು ಶ್ರೀ ಶಾಕಾಂಬರಿ ಸಹಸ್ರನಾಮ ಹೋಮ, ಮಧ್ಯಾಹ್ನ 1ಕ್ಕೆ ಮಹಾಪೂರ್ಣಾಹುತಿ, 3ಕ್ಕೆ ವಸಂತೋತ್ಸವ, ಧ್ವಜಾವರೋಹಣ ನಡೆಯಲಿದೆ. 28ರಂದು ಬೆಳಗ್ಗೆ 9.30ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ, ಸಂಜೆ 4ಕ್ಕೆ ಶ್ರೀ ಶಾಕಾಂಬರಿ ಅಮ್ಮನವರ ರಾಜಬೀದಿ ಉತ್ಸವ. ಬನಶಂಕರಿ ದೇವಿಯ ಶಯನೋತ್ಸವ. ಕೊನೆಯ ದಿನವಾದ 29ರಂದು ಬೆಳಗ್ಗೆ 8.30ಕ್ಕೆ ಮಹಾನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ಶ್ರೀ ಬನಶಂಕರಿ ದೇವಿ ಅವರಿಗೆ ಮಹಾಭಿಷೇಕದೊಂದಿಗೆ ಪೂಜೆ ಪೂರ್ಣಗೊಳ್ಳಲಿದೆ.