

ತರೀಕೆರೆ: ಬನದ ಹುಣ್ಣಿಮೆ ಅಂಗವಾಗಿ ಪಟ್ಟಣದ ಶ್ರೀಬನಶಂಕರಿ ದೇವಿಯವರ 11ನೇ ರಥೋತ್ಸವ ವೈಭವದಿಂದ ಜರುಗಿತು.
ಗಾಳಿಹಳ್ಳಿ ಕ್ರಾಸ್ ಸಮೀಪದ ಶ್ರೀಬನಶಂಕರಿ ದೇವಿ ದೇಗುಲದಲ್ಲಿ ಬೆಳಗ್ಗೆ ಮೂಲ ದೇವರಿಗೆ ವಿವಿಧ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಧ್ಯಾಹ್ನ ಗಂಟೆ 12ರಿಂದ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ 1 ಗಂಟೆಗೆ ನಾನಾ ಕಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ತೇರು ಎಳೆಯಲಾಯಿತು.
ತೇರು ಎಳೆಯುವ ಒಂದು ಗಂಟೆಗೂ ಮುಂಚೆ 11ನೇ ರಥೋತ್ಸವದ ಧ್ವಜದ ಹರಾಜು ಪ್ರಕ್ರಿಯೆ ನಡೆಸಲಾಯಿತು. ಭದ್ರಾವತಿ ಮೂಲದ ಎಸ್.ರಮೇಶ್ ಹರಾಜಿನಲ್ಲಿ 1.51ಲಕ್ಷ ರೂ.ಗೆ ರಥೋತ್ಸವದ ಧ್ವಜ ಪಡೆದು ಕೊಂಡರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1.30ರಿಂದ ಎಲ್ಲ ಭಕ್ತರು ಸರದಿ ಸಾಲಿನಲ್ಲಿ ನಿಂತು ಅನ್ನ ಪ್ರಸಾದ ಸ್ವೀಕರಿಸಿದರು.
ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಮಾಜಿ ಪುರಸಭೆ ಅಧ್ಯಕ್ಷರಾದ ಟಿ.ಎಸ್.ರಮೇಶ್, ಗಿರಿಜಮ್ಮ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಟಿ.ಜಿ.ಶಂಕರ್, ದೇಗುಲದ ಸ್ಥಳ ದಾನಿ ಟಿ.ಆರ್.ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.