

ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ನಗರದಲ್ಲಿರುವ ಬನಶಂಕರಿ ದೇವಿ ದೇವಸ್ಥಾನ ಆವರಣದಲ್ಲಿ ಸೋಮವಾರ ಸಂಜೆ ಬನಶಂಕರಿ ದೇವಿಯ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಧ್ಯಾಹ್ನ ಶಂಕರಪ್ಪ ಗುಡ್ಡದ ಅವರ ಮನೆಯಿಂದ ಕಿಲ್ಲಾದಲ್ಲಿರುವ ಕಾಳಿಕಾದೇವಿ ದೇವಸ್ಥಾನದ ಹತ್ತಿರ ಗಂಗಸ್ಥಳಕ್ಕೆ ಕರೆದೊಯ್ದಿದ್ದ ರಥದ ಕಲಶವನ್ನು ಶಿರೋಳ ಗ್ರಾಮದಿಂದ ಬಂದ ರಥದ ಹಗ್ಗದ ಮೆರವಣಿಗೆ ಜೊತೆ ದೇವಸ್ಥಾನಕ್ಕೆ ತರಲಾಯಿತು. ರಥವನ್ನು ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ ಕಲಶ ಏರಿಸಿದ ನಂತರ ಭಕ್ತರು ತೇರನ್ನೆಳೆದು ಪುನೀತರಾದರು.
ತಮ್ಮ ಇಚ್ಚೆಯನುಸಾರ ಉತ್ತತ್ತಿ, ಬಾಳೆಹಣ್ಣು, ಅಡಕೆ ಇನ್ನಿತರ ಮಂಗಲಕಾರಿ ವಸ್ತುಗಳನ್ನು ತೇರಿನ ಮೇಲೆ ಎಸೆದು ಹರಕೆ ತೀರಿಸಿದರು. ಪಾದಗಟ್ಟೆಯವರೆಗೂ ರಥವನ್ನೆಲೆದ ಮೇಲೆ ಹೊಸದಾಗಿ ನಿರ್ಮಿಸಿರುವ ತೇರಿನ ಮನೆಯ ಎದುರು ರಥವನ್ನು ನಿಲ್ಲಿಸಲಾಯಿತು. ಈ ವೇಳೆ ಗದ್ದಲ, ನೂಕು ನುಕ್ಕಾಟ ಆಗದಂತೆ ಜಾತ್ರಾ ಕಮಿಟಿಯವರು, ಪೊಲೀಸರು ವಿಶೇಷ ಮುತುವರ್ಜಿ ವಹಿಸಿದ್ದರು.