ಜನರಿಲ್ಲದೆ ಬಾಳೆಹೊನ್ನೂರು ಭಣಭಣ

bhr bundh
ಬಾಳೆಹೊನ್ನೂರಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಜನ, ವಾಹನ ಸಂಚಾರವಿಲ್ಲದೆ ಭಣಗುಡುತ್ತಿರುವ ಮುಖ್ಯರಸ್ತೆ.
Published on

ಬಾಳೆಹೊನ್ನೂರು: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ಕ್ಷೇತ್ರ ಬಂದ್‌ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಬೆಳಗ್ಗೆಯಿಂದಲೆ ವರ್ತಕರು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬೆಳಗ್ಗೆ 8 ಗಂಟೆ ಬಳಿಕ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತರು, ಸಾರ್ವಜನಿಕರು ಒಗ್ಗೂಡಿ ವಾಹನಗಳಲ್ಲಿ ಪ್ರತಿಭಟನಾ ಸಭೆ ನಡೆಯುವ ಕೊಪ್ಪಕ್ಕೆ ತೆರಳಿದರು.
ಖಾಂಡ್ಯ ಹೋಬಳಿಯಲ್ಲಿಯೂ ಕೃಷಿಕರು, ಸಾರ್ವಜನಿಕರು, ವ್ಯಾಪಾರಸ್ಥರು ಬೆಂಬಲ ಸೂಚಿಸಿದರು. ಹೋಬಳಿಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ಸಾರ್ವಜನಿಕರು ಸಹ ಖಾಂಡ್ಯ ನಾಗರಿಕ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಕೊಪ್ಪಕ್ಕೆ ತೆರಳಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಹಲವು ಶಾಲಾ ಕಾಲೇಜುಗಳಿಗೆ ಶಾಲಾ ಆಡಳಿತ ಮಂಡಳಿ ರಜೆ ಘೋಷಿಸಿತ್ತು. ಕೆಲವು ಶಾಲಾ ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಖಾಸಗಿ ಬಸ್ ಹಾಗೂ ಆಟೋಗಳ ಸಂಚಾರ ಇರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಸೇವೆ ಇದ್ದರೂ ಪ್ರಯಾಣಿಕರು ಇರಲಿಲ್ಲ.
ರಂಭಾಪುರಿ ಪೀಠ, ಮಸೀದಿಕೆರೆ, ರೇಣುಕನಗರ, ಕಡ್ಲೇಮಕ್ಕಿ, ಮಾಗುಂಡಿ, ಬನ್ನೂರು, ಮೇಲ್ಪಾಲ್, ಸೀಗೋಡು ಮುಂತಾದ ಕಡೆಗಳಲ್ಲಿಯೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ಮೆಡಿಕಲ್, ಪೆಟ್ರೋಲ್ ಪಂಪ್ ತೆರೆದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು. ಕೆಲವು ಬ್ಯಾಂಕುಗಳನ್ನು ತೆರೆದಿದ್ದರೂ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net