

ಗುಂಡ್ಲುಪೇಟೆ: ಇತ್ತೀಚೆಗೆ ಬೀಸಿದ ಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನೆಲಕಚ್ಚಿದ್ದು, ಬೆಳೆಗಾರರನ್ನು ಅಕ್ಷರಶಃ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಮೂರು ವರ್ಷಗಳಿಂದ ಗಾಳಿ ಮಳೆಗೆ ಲಕ್ಷಾಂತರ ಗಿಡಗಳು ನೆಲಕಚ್ಚುತ್ತಿರುವುದರಿಂದ ಬೆಳೆ ನಷ್ಟಕ್ಕೊಳಗಾಗುತ್ತಿರುವ ಬೆಳಗಾರರನ್ನು ರಕ್ಷಿಸಲು ಬಾಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.
ತಾಲೂಕಿನಲ್ಲಿ ಕಾರ್ಮಿಕರ ಕೊರತೆ ಹಾಗೂ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಸ್ಥಿರತೆ ದೊರಕುತ್ತಿರುವ ಪರಿಣಾಮ ಅರಿಶಿಣ ಬೆಳೆಯುವಷ್ಟೇ ಪ್ರಮಾಣದಲ್ಲಿ ಬಾಳೆಯನ್ನೂ ಬೆಳೆಯಲಾಗುತ್ತಿದೆ. ಅಂತರ್ಜಲ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದ ರೈತರು ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಸಾವಿರಾರು ಅಡಿ ಆಳಕ್ಕೆ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ನೀರು ಬರಲಾರಂಭಿಸಿದ ನಂತರ ಬರಡು ಭೂಮಿಗಳಲ್ಲಿಯೂ ನೀರಾವರಿ ಮಾಡಲಾಗುತ್ತಿದೆ.
ಸದ್ಯ ತಾಲೂಕಿನಲ್ಲಿ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ಪ್ರತಿ ವರ್ಷವೂ ಗಾಳಿ ಮಳೆಗೆ ಸಾವಿರಾರು ಎಕರೆ ಬಾಳೆ ನಾಶವಾಗುತ್ತಿದೆ. ಕಳೆದ ವರ್ಷ ವೀರನಪುರ ಗ್ರಾಮವೊಂದರಲ್ಲಿಯೇ 50 ಸಾವಿರಕ್ಕೂ ಹೆಚ್ಚಿನ ಸಸಿಗಳು ನೆಲಕಚ್ಚಿದ್ದವು. ಅದರ ಹಿಂದಿನ ವರ್ಷ ಮಾಡ್ರಹಳ್ಳಿ, ಮಲ್ಲಯ್ಯನಪುರ ಮುಂತಾದ ಗ್ರಾಮಗಳಲ್ಲಿ ನೂರಾರು ಎಕರೆಗಳಷ್ಟು ಬಾಳೆ ನೆಲಕ್ಕುರುಳಿದ್ದವು. ಕಳೆದ ಮೂರು ದಿನಗಳ ಹಿಂದೆ ತೆರಕಣಾಂಬಿ ಹೋಬಳಿಯಲ್ಲಿ 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ.
ಪುಡಿಗಾಸಿನ ಪರಿಹಾರ: ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ. ಪ್ರತಿ ಎಕರೆಗೆ ಸದ್ಯ 1 ರಿಂದ 1.2 ಲಕ್ಷ ರೂ. ವೆಚ್ಚವಾಗುತ್ತಿದೆ. ಆದರೂ ನೈಸರ್ಗಿಕ ವಿಪತ್ತು ನಿಧಿಯಲ್ಲಿ ಸರ್ಕಾರ ಜಿಲ್ಲಾಧಿಕಾರಿ ಶಿಫಾರಸ್ಸಿನ ಮೇರೆಗೆ ಪ್ರತಿ ಎಕರೆಗೆ 5 ರಿಂದ 8 ಸಾವಿರ ರೂ. ಮಾತ್ರ ಪರಿಹಾರ ನೀಡಲಾಗುತ್ತಿದೆ. ಇದರಿಂದ ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಬೇಕು ಎಂಬುದು ಬೆಳೆಗಾರರ ಒತ್ತಾಯವಾಗಿದೆ.
ಬದಲಾದ ಕಾಲಘಟ್ಟದಲ್ಲಿ ತಾಲೂಕಿನ ಬಹುತೇಕ ರೈತರು ಬಾಳೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಗೊನೆಕಟ್ಟುವ ಸಂದರ್ಭದಲ್ಲಿ ಗಾಳಿ ಮಳೆಯಿಂದ ಸರ್ವಸ್ವವನ್ನೂ ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಸರ್ಕಾರ ಉತ್ಪಾದನಾ ವೆಚ್ಚದ ಕನಿಷ್ಠ ಅರ್ಧದಷ್ಟು ಪರಿಹಾರ ದೊರಕುವಂತೆ ಮಾಡಬೇಕು. ಇದಕ್ಕಾಗಿ ಬೆಳೆ ವಿಮೆ ಸೌಲಭ್ಯ ಒದಗಿಸುವ ಮೂಲಕ ಬೆಳೆಗಾರರಿಗೆ ಆಗುತ್ತಿರುವ ನಷ್ಟದ ಪ್ರಮಾಣವನ್ನು ತಗ್ಗಿಸಲು ಕ್ರಮಕೈಗೊಳ್ಳಬೇಕು.
ಚಿನ್ನಸ್ವಾಮಿ ವಡ್ಡಗೆರೆ ಪ್ರಗತಿಪರ ರೈತ
ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಜೋರುಗಾಳಿ ಬೀಸುತ್ತಿದ್ದು, ಬಾಳೆ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಸಾಮಾನ್ಯ ಬೆಳೆಗಳಿಗೆ ಫಸಲು ಬಿಮಾ ಯೋಜನೆ ಇದ್ದರೆ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆಯು ಅನ್ವಯವಾಗುತ್ತದೆ. ಆದರೂ ಸರ್ಕಾರ ಇದನ್ನು ಜಾರಿಗೆ ತರದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇನ್ನಾದರೂ ಸರ್ಕಾರ ವಿಮೆ ವ್ಯಾಪ್ತಿಗೆ ಸೇರಿಸಲು ಕ್ರಮಕೈಗೊಳ್ಳಬೇಕು.
ಎಸ್.ಎಂ.ನಾಗಾರ್ಜುನಕುಮಾರ್, ಸಂಶೋಧನಾ ವಿದ್ಯಾರ್ಥಿ