

ಕಾರವಾರ:ಶತಕ ದಾಟಿದ್ದ ಪ್ರತಿ ಕೆಜಿ ಟೊಮೆಟೊ ಬೆಲೆ ಇಳಿಕೆಯಾಗುತ್ತ ಬಂದಿದೆ. ಈಗ ಶತಕ ಭಾರಿಸುವ ಸರದಿ ಕದಳಿ ಎಂದರೆ, ಬಾಳೆ ಹಣ್ಣಿನದು.
ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶ್ರಾವಣಕ್ಕೂ ಮುಂಚೆ ಬಾಳೆ ಹಣ್ಣಿನ ಬೆಲೆ ಪ್ರತಿ ಕೆಜಿಗೆ 100 ರೂ. ದಾಟಿದೆ.
ಕಾರವಾರ ಮಾರುಕಟ್ಟೆಯಲ್ಲಿ ಭಾನುವಾರ ಪ್ರತಿ ಕೆಜಿ ಮೈಸೂರು ಮೆಟ್ಲು, ಅಥವಾ ಮಿಟಕಾ ಬಾಳೆಹಣ್ಣು 100 ರೂ.ಗೆ ಮಾರಾಟವಾದರೆ, ದೊಡ್ಡ ಗಾತ್ರದ ಪಚ್ಚ ಬಾಳೆ ಹಣ್ಣು 60 ರೂ.ದಿಂದ 80 ರೂ.ಗೆ ಏರಿಕೆಯಾಗಿದೆ.
ಹಬ್ಬಗಳ ಕಾಲ ಶುರುವಾದಗ ಎಂದರೆ ಶ್ರಾವಣದಿಂದ ಕಾರ್ತೀಕ ಮಾಸದವರೆಗೆ ಬಾಳೆ ಹಣ್ಣಿನ ಬೆಲೆ ಏರಿಕೆಯಾಗುವುದು ಸಾಮಾನ್ಯ.
ಆದರೆ, ಈ ಬಾರಿ ಹಬ್ಬಗಳ ಸೀಜನ್ ಶುರುವಾಗುವುದಕ್ಕೂ ಮುಂಚೆಯೇ ಹಣ್ಣಿನ ಬೆಲೆ ತೀವ್ರ ಏರಿಕೆಯಾಗಿದ್ದು, ಶ್ರಾವಣದಲ್ಲಿ ಬೆಲೆ ಪ್ರತಿ ಕೆಜಿಗೆ 120 ರಿಂದ 150 ರೂ.ಗೆ ಏರಿಕೆಯಾದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಹಣ್ಣಿನ ವ್ಯಾಪಾರಸ್ಥ ಮಹಾದೇವ ನಾಯ್ಕ.
ಏಕೆ ಈ ಏರಿಕೆ..?
ಕರಾವಳಿ ಹಾಗೂ ಗೋವಾ ಭಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಿಂದ ಬಾಳೆ ಕೊನೆಗಳು ಪೂರೈಕೆಯಾಗುತ್ತವೆ. ಮಂಗ, ಹಂದಿ ಮುಂತಾದ ಕಾಡು ಪ್ರಾಣಿಗಳ ಹಾವಳಿ, ಕಟ್ಟೆ ರೋಗ ಮುಂತಾದ ಕಾರಣದಿಂದ ಬಾಳೆ ಗೊನೆಗಳ ಪೂರೈಕೆ ತೀವ್ರ ಇಳಿಕೆ ಕಂಡಿದೆ.
ಶಿರಸಿ ಹಾಫ್‌ಕಾಮ್ಸ್ನಲ್ಲಿ ಪ್ರತಿ ದಿನ ಮೂರ್ನಾಲ್ಕು ಟನ್ ಬೇಡಿಕೆ ಇದೆ. ಆದರೆ, ಗರಿಷ್ಠ 1 ಟನ್ ಮಾತ್ರ ಆವಕವಾಗುತ್ತಿದೆ.
ಇನ್ನು ಟಿಎಸ್‌ಎಸ್‌ನಲ್ಲಿ ಬಾಳೆಗೊನೆ ಹರಾಜು ನಡೆಯುತ್ತಿದ್ದು, ಪ್ರತಿ ದಿನ 1.5 ರಿಂದ 2 ಟನ್ ಬಾಳೆಗೊನೆ ಆವಕವಾಗುತ್ತಿದೆ.
ಇದನ್ನೂ ಓದಿ:ಶುದ್ಧ ನೀರು ಪೂರೈಕೆ ಬಂದ್
ಖಾಸಗಿಯಾಗಿ ಖರೀದಿ ಮಾಡುವ ಹಲವು ವರ್ತಕರಿಗೆ ಬಾಳೆಗೊನೆ ದೊರೆಯದ ಕಾರಣ ಅವರು ಟಿಎಸ್‌ಎಸ್‌ನಲ್ಲಿ ಹರಾಜಿನಲ್ಲಿ ಬಾಳೆಗೊನೆ ಖರೀದಿಸುತ್ತಿದ್ದಾರೆ.
ಕಳೆದ ವರ್ಷ ಈ ಅವಽಯಲ್ಲಿ ಪ್ರತಿ ಕೆಜಿ ಮೆಟ್ಲ ಬಾಳೆ 45 ರೂ.ಗೆ ಮಾರಾಟವಾಗಿತ್ತು. ಈ ವರ್ಷ ಈಗಾಗಲೇ ಗರಿಷ್ಠ 62 ರೂ. ತಲುಪಿದೆ. ಸರಾಸರಿ 55 ರೂ. ಬೆಲೆ ಸಿಗುತ್ತಿದೆ ಎನ್ನುತ್ತಾರೆ ಹಾಪ್‌ಕಾಮ್ಸ್ ನ ಪ್ರಬಂಧಕ ಗಿರೀಶ ಹೆಗಡೆ. ಇನ್ನೂ ಸಾಕಷ್ಟು ಬೇಡಿಕೆ ಇರುವುದರಿಂದ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬುದು ಅವರ ಅಭಿಪ್ರಾಯ.
ಬೇಸಿಗೆಯಲ್ಲಿ ಉಷ್ಣದ ವಾತಾವರಣವಿರುವುದರಿಂದ ಬಾಳೆಗೊನೆ ಬೆಳೆದ ತಕ್ಷಣ ಹಣ್ಣಾಗಿಬಿಡುತ್ತದೆ. ಈಗ ಮಳೆಗಾಲದಲ್ಲಿ ನಿಧಾನವಾಗಿ ಹಣ್ಣಾಗುತ್ತದೆ. ಇದರಿಂದ ಬಾಳೆಗೊನೆ ಇದ್ದರೂ ಹಣ್ಣು ಸಿಗುವುದು ಕಡಿಮೆ. ಇನ್ನು ಬಾಳೆಗೊನೆ ಮಾರುವವರು ಸಣ್ಣಪುಟ್ಟ ರೈತರೇ ಹೆಚ್ಚು, ಗದ್ದೆ ನಾಟಿ, ಅಡಕೆಗೆ ಮದ್ದು ಹೊಡೆಯುವ ವೇಳೆಯಾಗಿದ್ದರಿಂದ ರೈತರು ಮಾರುಕಟ್ಟೆಗೆ ಬರುವುದೂ ಕಡಿಮೆ ಇದರಿಂದಲೂ ಬಾಳೆಗೆ ಬೆಲೆ ಬಂದಿದೆ.ಗಿರೀಶ ಹೆಗಡೆಹಾಪ್‌ಕಾಮ್ಸ್ ಪ್ರಬಂಧಕ