ವೈಭವದ ದಸರಾ ಆಚರಣೆಗೆ ಬಾಳೆಹೊನ್ನೂರು ಸಜ್ಜು

01bhr 2
Published on

ಬಾಳೆಹೊನ್ನೂರು: ಬಾಳೆಹೊನ್ನೂರಿನಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಕ್ಷೇತ್ರದ ಅದಿದೇವತೆ ಮೃತ್ಯಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 2010ರಲ್ಲಿ ಕೇವಲ ಧಾರ್ಮಿಕ ನೆಲೆಗಟ್ಟಿನಲ್ಲಿ ಆರಂಭಿಸಿದ ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವ ಧರ್ಮಾವಲಂಬಿತ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಯುವಜನತೆಯಿಂದ ದೂರವಾಗುತ್ತಿರುವ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ನೀಡಬೇಕು ಎಂಬ ಉದ್ದೇಶದಿಂದ ಆರಂಭಿಸಿದ ಉತ್ಸವ ಇಂದು ಸಂಸ್ಕೃತಿ, ಸಂಪ್ರದಾಯ ರಕ್ಷಿಸುವ ಜತೆಗೆ ಹಲವರ ಮನ ಪರಿವರ್ತನೆಗೂ ಸಾಕ್ಷಿಯಾಗಿದೆ. ಸಮಾನ ಮನಸ್ಕ ಹಾಗೂ ಯುವಪಡೆ ಹೊಂದಿರುವ ನವರಾತ್ರಿ ಪೂಜಾ ಸಮಿತಿ ಪದಾಧಿಕಾರಿಗಳು ನವರಾತ್ರಿ ಆಚರಣೆ ವೇಳೆ ಸಂಪ್ರದಾಯಬದ್ಧವಾಗಿಬ್ರಹ್ಮಚರ್ಯ, ಸಾತ್ವಿಕ ಆಹಾರ, ಸಾಂಪ್ರದಾಯಿಕ ಉಡುಗೆ ತೊಡುಗೆ ತೊಡುವುದು ವಿಶೇಷವಾಗಿದೆ.
ಉತ್ಸವದಲ್ಲಿ ಲೋಕಕಲ್ಯಾಣಾರ್ಥ ಪ್ರತಿನಿತ್ಯ ಸಪ್ತಶತೀ ಪಾರಾಯಾಣಾದಿ, ದುರ್ಗಾಹೋಮ, ಹೂವಿನ ಪೂಜೆ ನಡೆಸಲಾಗುತ್ತಿದೆ. ಮೂರನೇ ವರ್ಷದ ಉತ್ಸವದಿಂದ ನಿತ್ಯ ಮಧ್ಯಾಹ್ನ ಆಗಮಿಸುವ 2500-3000 ಭಕ್ತರಿಗೆ ಅನ್ನಸಂತರ್ಪಣೆ, ವಿಜಯದಶಮಿ ದಿನ 15,000ಕ್ಕೂ ಅಧಿಕ ಭಕ್ತರಿಗೆ ಗ್ರಾಮೀಣ ಪ್ರದೇಶದಲ್ಲಿ ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ, ಅಬ್ಬರದ ಸಂಗೀತಗಳಿಗೆ ಸಂಪೂರ್ಣ ಕಡಿವಾಣ ಹಾಕಿರುವ ಸಮಿತಿ, ಭಾರತೀಯ ಪುರಾತನ ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ದೇಶಾಭಿಮಾನದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅಚ್ಚುಕಟ್ಟಾಗಿ ನಡೆಸುತ್ತಿದೆ.
ಪ್ರತಿ ವರ್ಷ ಸಾಧಕ ಪ್ರತಿನಿಧಿಗಳಿಗೆ ದುರ್ಗಾ ರಕ್ಷೆ ನೀಡಿ ಸನ್ಮಾನ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅಂತಿಮ ದಿನ ದುರ್ಗಾದೇವಿಯ ಜಲಸ್ತಂಭನಾ ಶೋಭಾಯಾತ್ರೆಯಲ್ಲಿ ದೇಶದ 20ಕ್ಕೂ ಅಧಿಕ ವಿವಿಧ ಕಲಾ ಪ್ರಾಕಾರಗಳನ್ನು ಕರೆಯಿಸಿ ಸ್ಥಳೀಯರಿಗೆ ಪರಿಚಯಿಸಲಾಗುತ್ತಿದೆ. ಅ.3ರಂದು ಪಟ್ಟಣದಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಪಟ್ಟಣದ ಮುಖ್ಯರಸ್ತೆ ಹಾಗೂ ಮಾರ್ಕಾಂಡೇಶ್ವರ ದೇಗುಲದ ಆವರಣವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net