

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಹಜ ಸಮೃದ್ಧ ಸಂಸ್ಥೆಯು 2 ದಶಕಗಳಿಂದ ದೇಸಿ ತಳಿ ಸಂರಕ್ಷಣೆ, ಸಾವಯವ ಕೃಷಿ, ರೈತ ಮಾರುಕಟ್ಟೆ ಹಾಗೂ ನಿರ್ಲಕ್ಷಿತ ಬೆಳೆಗಳ ಬಳಕೆಗೆ ಉತ್ತೇಜನ ನೀಡುವ ಯೋಜನೆಗಳನ್ನು ರೈತರ ಜತೆಗೂಡಿ ರಾಜ್ಯಾದ್ಯಂತ ಅನುಷ್ಠಾನ ಮಾಡುತ್ತಿದೆ. ಸ್ಥಳೀಯವಾಗಿ ನಿರ್ಲಕ್ಷ್ಯಕ್ಕೊಳಗಾದ ತಳಿಗಳನ್ನು ಮತ್ತೆ ಬೇಸಾಯ ವಲಯಕ್ಕೆ ತಂದು ರೈತರು ಹಾಗೂ ಗ್ರಾಹಕರಿಗೆ ಪುಷ್ಠಿದಾಯಕ ಆಹಾರ ಸೇವನೆಯನ್ನು ಉತ್ತೇಜಿಸುತ್ತಿದೆ. ಅದರ ಭಾಗವಾಗಿ ವಿವಿಧ ತಳಿಗಳ ಬಾಳೆಗಳನ್ನು ಪರಿಚಯಿಸಲು ನಗರದ ಗಾಂಧಿ ಶಾಂತಿ ಪ್ರತಿಷ್ಠಾನದ ಸಭಾಂಗಣದಲ್ಲಿ ನ. 28 ಹಾಗೂ 29ರಂದು ಬಾಳೆ ಮೇಳವನ್ನು ಹಮ್ಮಿಕೊಂಡಿದೆ. ನೂರಾರು ತಳಿಗಳ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.