

ಶಿರಸಿ: ಮಳೆಯ ಅಬ್ಬರ ಕಡಿಮೆ ಆದಮೇಲೆ ತಾಲೂಕಿನಲ್ಲಿ ಬಾಳೆ ಬೆಳೆಗೆ ಸಂಕಷ್ಟ ಎದುರಾಗಿದೆ. ಸಂಪಖಂಡ, ಹುಲೇಕಲ್ ಹೋಬಳಿ ಸೇರಿ ಅನೇಕ ಕಡೆಗಳಲ್ಲಿ ಹುಳುಗಳು ಬಾಳೆ ಎಲೆ ತಿನ್ನತೊಡಗಿವೆ. ಇದರಿಂದಾಗಿ ಬಾಳೆ ಮರಗಳು ಸಾವಿನೆಡೆ ಮುಖ ಮಾಡಿವೆ.
ಅಡಕೆಗೆ ಕೊಳೆ ರೋಗ, ಎಲೆಚುಕ್ಕೆ ರೋಗದಿಂದ ಕಂಗೆಟ್ಟಿರುವ ತೋಟಗಾರಿಕೆ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಲಾಭದಾಯಕ ಬೆಳೆಯಾದ ಬಾಳೆಗೆ ಕೀಟ ಬಾಧೆ ಅಂಟಿಕೊಳ್ಳುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಸಿಲುಕುವಂತಾಗಿದೆ. ಹಬ್ಬದ ಈ ದಿನಗಳಲ್ಲಿ ಬಾಳೆ ಬೆಳೆಗೆ ಉತ್ತಮ ದರವಿತ್ತಾದರೂ ಕೀಟದ ಬಾಧೆಯಿಂದ ಬಾಳೆ ಮರ ಸಾವನ್ನಪ್ಪುತ್ತಿದ್ದು, ಉಪ ಬೆಳೆ ಬಾಳೆಯನ್ನೂ ಕಳೆದುಕೊಳ್ಳುವ ಆತಂಕವನ್ನು ರೈತರು ಎದುರಿಸುವಂತಾಗಿದೆ.
ತಾಲೂಕಿನ ಬನವಾಸಿ ಹೋಬಳಿಯಲ್ಲಿ 1031 ಹೆಕ್ಟೇರ್, ಹುಲೇಕಲ್ ಹೋಬಳಿಯಲ್ಲಿ 741 ಹೆಕ್ಟೇರ್, ಶಿರಸಿ ಹೋಬಳಿಯಲ್ಲಿ 561 ಹೆಕ್ಟೇರ್ ಸೇರಿ ಒಟ್ಟು 3,114 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ತಾಲೂಕಿನ ಪಶ್ಚಿಮ ಭಾಗದಲ್ಲಿ ತೋಟದ ಮಧ್ಯೆ ಉಪ ಬೆಳೆಯನ್ನಾಗಿ ಬಾಳೆ ಬೆಳೆದರೆ, ಪೂರ್ವ ಭಾಗವಾದ ಬನವಾಸಿ, ಗುಡ್ನಾಪುರ, ಕಂಡ್ರಾಜಿ, ಬದನಗೋಡ, ಬಾಶಿ, ದಾಸನಕೊಪ್ಪದಲ್ಲಿ ಬಾಳೆಯನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಕಟ್ಟೆ ರೋಗದಿಂದ ಇಳುವರಿ ಕುಂಠಿತವಾಗಿತ್ತು. ಈಗ ಕೀಟ ಬಾಧೆ ಆವರಿಸಿ ಊಟಕ್ಕೂ ಬಾಳೆ ಇಲ್ಲದ ಸ್ಥಿತಿ ಉಂಟಾಗಿದೆ. ಕೀಟಗಳು ಸುಳಿ ತಿಂದು ಸಂಪೂರ್ಣ ನಾಶಪಡಿಸುತ್ತಿವೆ. ಒಂದೆರಡು ದಿನದಲ್ಲಿ ಬಾಳೆ ಮರ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿವೆ. ವಾರದಿಂದಿಚೇಗೆ ಕೀಟದ ಪ್ರಮಾಣವೂ ಹೆಚ್ಚಾಗುತ್ತಿದೆ ಎನ್ನುತ್ತಾರೆ ಹಲವು ರೈತರು.
ಮಳೆ ಕಡಿಮೆಯಾದ ಮೇಲೆ ಕೀಟಗಳ ಪ್ರಮಾಣ ಹೆಚ್ಚಾಗುತ್ತದೆ. ಪ್ರಖರ ಬಿಸಿಲಿಗೆ ಹುಳುಗಳು ಸಾವನ್ನಪ್ಪುತ್ತವೆ. ಬಾಳೆ ಎಲೆಗೆ ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ಕೀಟ ಬಾಧೆ ಹತೋಟಿ ಸಾಧ್ಯ. ಕ್ಲೋರೋಪರಿಪೊಸ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ, ಸಿಂಪಡಣೆ ಮಾಡುವುದರಿಂದ ನಿಯಂತ್ರಣ ಮಾಡಬಹುದು. | ಗಣೇಶ ಹೆಗಡೆ, ತೋಟಗಾರಿಕೆ ಇಲಾಖೆ ಅಧಿಕಾರಿ