

ನಂಜನಗೂಡು: ಶುಕ್ರವಾರ ಸಂಜೆ ಭಾರೀ ಮೋಡ ಕವಿದ ವಾತಾವರಣವಿದ್ದರೂ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ತಾಲೂಕಿನ ಜನತೆ ನಿರಾಶೆಗೊಂಡರೂ ಬಿರು ಬಿಸಿಲ ನಡುವೆ ವರುಣರಾಯ ಇಳೆಗೆ ತಂಪೆರೆದರಿಂದ ಮಳೆ ಕಾಣದೇ ಕಂಗೆಟ್ಟಿದ್ದ ಜನತೆ ತುಸು ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಸಮೇತ ಮಳೆ ಆಗಮನವಾಗಿದೆ. ಆದರೆ ಬಿರುಗಾಳಿಗೆ ಹಲವೆಡೆ ರೈತರು ಬೆಳೆದಿದ್ದ ಬಾಳೆ ಫಸಲು ಧರೆಗುರುಳಿವೆ. ಶಿರಮಳ್ಳಿ ಗ್ರಾಮದಲ್ಲಿ ಸುರೇಶ್ ಎಂಬುವರಿಗೆ ಸೇರಿದ ಎರಡು ಎಕರೆ ಪ್ರದೇಶದ ಬಾಳೆ ಬೆಳೆ ನಾಶವಾಗಿದೆ.
ಇನ್ನು ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ವಾತಾವರಣವಿದ್ದರೂ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಶುಕ್ರವಾರ ರಾತ್ರಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.