ಕಾಡಾನೆಗಳ ದಾಳಿಯಿಂದ ಬಾಳೆ ಬೆಳೆ ನಾಶ

10 SARAG 1
ಸರಗೂರು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ರವೀಶ್ ಅವರ ಬಾಳೆ ತೋಟದಲ್ಲಿ ಕಾಡಾನೆಗಳು ಬೆಳೆ ನಾಶ ಮಾಡಿರುವುದು.
Published on

ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ರೈತರ ಬಾಳೆ ತೋಟವನ್ನು ತುಳಿದು ನಾಶ ಮಾಡಿವೆ.

ದೇವಲಾಪುರ ಗ್ರಾಮದ ರವೀಶ್ ಎಂಬುವರಿಗೆ ಸೇರಿದ ಎರಡು ಎಕರೆ ಬಾಳೆ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಸಂಚರಿಸಿ ಗಿಡಗಳನ್ನು ತಿಂದು ನಾಶ ಮಾಡಿವೆ. ಅಲ್ಲದೆ ತೋಟದಲ್ಲೇ ಲದ್ದಿ ಹಾಕಿ ಹೋಗಿವೆ. ಕಳೆದ ಕೆಲವು ದಿನಗಳ ಹಿಂದೆಯೂ ಈ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದವು. ಮತ್ತೆ ಕಾಡಾನೆಗಳ ದಾಳಿ ಗ್ರಾಮದಲ್ಲಿ ಮುಂದುವರಿದಿದ್ದು ಗ್ರಾಮಸ್ಥರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ.
ಇನ್ನು 15 ದಿನಗಳಲ್ಲಿ ಕಟಾವಿಗೆ ಬಂದಿದ್ದ 1,500 ಬಾಳೆ ಗಿಡಗಳನ್ನು ಕಾಡಾನೆಗಳು ನಾಶ ಮಾಡಿವೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತ ರವೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಐದಾರು ಆನೆಗಳ ಹಿಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಗಜಪಡೆ ಕಾಡಿಗಟ್ಟಲು ಒತ್ತಾಯ: ದೇವಲಾಪುರ, ಹುಲ್ಲೇಮಾಳ, ಹೆಗ್ಗನೂರು ಮತ್ತಿತರ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳವಿದೆ. ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಕಾಡಾನೆಗಳು ಬರುತ್ತಿದ್ದು ಬೆಳೆ ಹಾನಿ ಮಾಡಿ ಹೋಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹಲವು ಕಡೆ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ತೋಟದ ಕಾರ್ಮಿಕರು, ಶಾಲಾ ಮಕ್ಕಳು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸಿ, ಶಾಶ್ವತ ಪರಿಹಾರ ಒದಗಿಸಿ ಅವುಗಳ ಹಾವಳಿಯನ್ನು ತಡೆಗಟ್ಟಬೇಕು. ಈ ಭಾಗದಲ್ಲಿ ಕಾಡುಪ್ರಾಣಿಗಳು ಬೆಳೆ ನಾಶ ಮಾಡಿದ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದರೂ ಸ್ಥಳಕ್ಕೆ ಬರುತ್ತಿಲ್ಲ. ಈ ಭಾಗದ ರೈತರು ನಮ್ಮ ಕಷ್ಟವನ್ನು ಯಾರಿಗೆ ಹೇಳಬೇಕು ಎನ್ನುವ ಪ್ರಶ್ನೆ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net