ಸಮಾಜ ಸಂಘಟನೆಗೆ ಪೂರಕ ಕಾರ್ಯ ಅಗತ್ಯ,  ಮಾಜಿ ಸಿಎಂ ಜಗದೀಶ ಶೆಟ್ಟರ್ ಅಭಿಮತ,  ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ

IMG-20250720-WA0010-1.jpg
Published on

ಹುಬ್ಬಳ್ಳಿ: ಮಹಾತ್ಮ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಬಣಜಿಗ ಸಮಾಜ ಸಂಘಟನೆ ಮಾಡುವುದು ಅಗತ್ಯವಾಗಿದೆ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಇಲ್ಲಿಯ ಗುಜರಾತ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕು ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಉಪ ಪಂಗಡಗಳಲ್ಲಿ ಯಾವುದೇ ಭೇದ ಇಲ್ಲ. ಬೇರೆ ಎಲ್ಲ ಪಂಗಡದವರು ಸಮಾಜದ ಮಕ್ಕಳಿಗೆ ಪುರಸ್ಕಾರ ನೀಡುವಂತೆ ಇಲ್ಲಿಯೂ ನಡೆಯುತ್ತಿದೆ. ಆ ಮೂಲಕ ಸಮಾಜ ಒಗ್ಗೂಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸಮೀಕ್ಷೆ ಮಾಡಿ:
ಸರ್ಕಾರ ಈಗ ಜಾತಿ ಗಣತಿ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ, ಬಣಜಿಗ ಸಮಾಜವೇ ಸಮೀಕ್ಷೆ ಮಾಡಿ ಅಂಕಿ ಸಂಖ್ಯೆ ಕಲೆ ಹಾಕಬೇಕು. ಇದರಿಂದ ನಿಖರತೆ ಸಿಗುತ್ತದೆ. ಮಹಾರಾಷ್ಟ್ರದಲ್ಲೇ ದಶಕದ ಹಿಂದೆ ಒಂದು ಕೋಟಿಗಿಂತ ಹೆಚ್ಚು ಲಿಂಗಾಯತ ಸಮುದಾಯದವರು ಇದ್ದರು. ಕರ್ನಾಟಕದಲ್ಲಿ ಅದಕ್ಕಿಂತ ಹೆಚ್ಚು ಇದ್ದಾರೆ. ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದ್ದ ಜಾತಿ ಗಣತಿಯಲ್ಲಿ ಅತ್ಯಂತ ಕಡಿಮೆ ತೋರಿಸಲಾಗಿತ್ತು. ಹಾಗಾಗಿ ಸಮಾಜದವರೇ ಗಣತಿ ಮಾಡಿ ದಾಖಲೆ ಇಟ್ಟುಕೊಳ್ಳುವುದು ಉತ್ತಮ ಎಂದರು.

ಬಸವನಬಾಗೇವಾಡಿಯ ಶಿಕ್ಷಕ ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಬಣಜಿಗ ಸಮಾಜಕ್ಕೆ ಬಹುದೊಡ್ಡ ಇತಿಹಾಸವಿದೆ. ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ. 56 ವಚನಗಳಲ್ಲಿ ಬಣಜಿಗ ಶಬ್ದ ಬಳಕೆಯಾಗಿದೆ. ಬಸವಣ್ಣನವರ ವಾರಸುದಾರರು ನಾವು. ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜ ಇದು ಎಂದರು.

ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ರಾಜಣ್ಣ ಹೊಸಕಟ್ಟಿ ಮಾತನಾಡಿ, ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ವಿಜಯಪುರ ಮಹಿಳಾ ವಿವಿ ಕುಲಪತಿ ವಿಜಯಾ ಕೋರಿಶೆಟ್ಟರ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ ಉಪಸ್ಥಿತರಿದ್ದರು.

ಸಮಾಜದ ವೈದ್ಯರು, ಉದ್ಯಮಿಗಳು, ವಕೀಲರು, ವ್ಯಾಪಾರಸ್ಥರು ಹೀಗೆ ಅನೇಕ ಸಾಧಕರು ಹಾಗೂ ಮಕ್ಕಳನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಭಂಡಿವಾಡ ಗಿರೀಶ ಆಶ್ರಮದ ಡಾ. ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಬಣಜಿಗ ಸಮಾಜವು ನೀರು ಇದ್ದಂತೆ, ನೀರು ಬೆಂಕಿ ಆರಿಸುವುದೇ ಹೊರತು ಹಚ್ಚುವುದಿಲ್ಲ. ಒಳ್ಳೆಯ ಕೆಲಸಗಳನ್ನು ಮಾತ್ರ ಮಾಡುತ್ತದೆ. ಮಕ್ಕಳಿಗೆ ಸಾಧನೆಯೇ ಪಥವಾಗಬೇಕು. ಗುರಿ ತಲುಪುವವರೆಗೂ ಕಿವಿ ಮುಚ್ಚಿಕೊಂಡಿರಬೇಕು. ಆ ನಂತರ ಸಾಧನೆಯೇ ಮಾತನಾಡಬೇಕು ಎಂದು ಹೇಳಿದರು.

ತಾಲೂಕು ಬಣಜಿಗ ಸಮಾಜ ಅಧ್ಯಕ್ಷ ಆನಂದ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಚನ್ನಬಸಪ್ಪ ಧಾರವಾಡಶೆಟ್ರು, ಅರವಿಂದ ಜಮಖಂಡಿ, ಶರಣಪ್ಪ ಕೊಟಗಿ, ಡಾ. ಲಿಂಗರಾಜ ಮುಳ್ಳಳ್ಳಿ, ಬಸವರಾಜ ಯಕಲಾಸಪುರ, ಶಿದ್ದು ಮಮದಾಪುರ, ತಾರಾದೇವಿ ವಾಲಿ, ಚನ್ನು ಹೊಸಮನಿ, ವೀರಣ್ಣ ಮಳಗಿ ಇತರರು ಇದ್ದರು.

ಸಂಚಾಲಕ ಮಲ್ಲಿಕಾರ್ಜುನ ಶಿರಗುಪ್ಪಿ ನಿರ್ವಹಿಸಿದರು. ಎಫ್.ಸಿ. ಕೋರಿಶೆಟ್ಟರ, ರಾಜೇಶ್ವರಿ ಮಳಲಿ ನಿರೂಪಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net