

ರಬಕವಿ/ಬನಹಟ್ಟಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬನಹಟ್ಟಿ ಹೆಸ್ಕಾಂ ಕಚೇರಿಗೆ ಶನಿವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಮುಖಂಡ ಈಶ್ವರ ಬಿರಾದಾರಪಾಟೀಲ ಮಾತನಾಡಿ, ಬನಹಟ್ಟಿ ಸಮೀಪದ ತೋಟದ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಇರುವುದರಿಂದ ಕಬ್ಬು, ಅರಿಶಿಣ ಬೆಳೆ ಸೇರಿದಂತೆ ಎಲ್ಲ ಬೆಳೆಗಳು ಒಣಗುತ್ತಿದ್ದು, ತೀವ್ರ ತೊಂದರೆಯಾಗಿದೆ. ಈ ಮೊದಲು ಪ್ರತಿ ದಿನ ಸಂಜೆ 6 ರಿಂದ ಬೆಳಗಿನ 6 ವರೆಗೆ ಸಿಂಗಲ್ ಫೇಸ್ ಮತ್ತು ಹಗಲು ಹೊತ್ತಿನಲ್ಲಿ 7 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆದರೆ ಈಗ ಮೂರು ಗಂಟೆ ಮಾತ್ರ ಸಿಂಗಲ್ ಫೇಸ್, 4 ಗಂಟೆ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ಧಾರೆ. ಆದರೆ ಮತ್ತೆ ಮಧ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ರಾತ್ರಿ ಹೊತ್ತು ಸರಿಯಾದ ವಿದ್ಯುತ್ ಪೂರೈಕೆ ಇಲ್ಲದೆ ಇರುವುದರಿಂದ ತೋಟದ ಪ್ರದೇಶದಲ್ಲಿಯ ದನ ಕರುಗಳು, ಮೇಕೆ, ಆಡುಗಳ ಹಾಗೂ ಕೃಷಿ ಉಪಕರಣಗಳ ಕಳ್ಳತನ ಹೆಚ್ಚಾಗಿದೆ. ವಿದ್ಯಾರ್ಥಿಗಳ ಓದಿಗೆ ಬಹು ದೊಡ್ಡ ಸಮಸ್ಯೆಯಾಗಿದೆ ಎಂದರು.
ರೈತ ಮುಖಂಡ ಭೀಮಶಿ ಪಾಟೀಲ ಮಾತನಾಡಿದರು. ಹೆಸ್ಕಾಂ ಅಧಿಕಾರಿಗಳಾದ ಎಸ್.ಜಿ.ಕಲಕಂಬ, ಗಿರೀಶ ಗೊಂದಳಿ, ಸಿದ್ದು ಮಹೇಷವಾಡಗಿ, ಪಿ.ಬಿ.ಸತ್ತಿ ರೈತರ ಜತೆ ಚರ್ಚಿಸಿ ಸಮಾಧಾನಗೊಳಿಸಿದರು.