

ಬೆಂಗಳೂರು: ಬಿಬಿಎಂಪಿಯ ಗಣೇಶಮಂದಿರ ವಾರ್ಡ್‌ನ ಬನಗಿರಿನಗರದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಬನಶಂಕರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯವರು (ಎಆರ್‌ಒ) ಖಾಸಗಿ ವ್ಯಕ್ತಿಗಳಿಗೆ ನಕಲಿ ದಾಖಲೆಗಳ ಮೂಲಕ ಪರಭಾರೆ ಮಾಡಲಾಗಿದೆ ಎಂಬ ಆರೋಪಿಸಿ ಲೋಕಾಯುಕ್ತ ಹಾಗೂ ಬಿಎಂಟಿಎಫ್ಗೆ ದೂರು ದಾಖಲಿಸಲಾಗಿದೆ.
ಉತ್ತರಹಳ್ಳಿ ಹೋಬಳಿಯ ಕತ್ರಿಗುಪ್ಪೆ ಗ್ರಾಮಕ್ಕೆ ಸೇರಿದ ಸರ್ವೆ ನಂ. 125 ಮತ್ತು 126ರಲ್ಲಿ ಉದ್ಯಾನಕ್ಕೆಂದು 4.31 ಎಕರೆ ವಿಸ್ತೀರ್ಣದ ಜಾಗವನ್ನು ಕಾಯ್ದಿರಿಸಲಾಗಿತ್ತು. ಈ ಪೈಕಿ ತಲಾ 1,200 ಚದರ ಅಡಿಗಳಷ್ಟು ಸ್ವತ್ತನ್ನು ಕೆ.ಜುನೇಂದ್ರ ಕುಮಾರ್, ವಾಣಿ ಆರ್. ಜುನೇಂದ್ರ ಕುಮಾರ್ ಹಾಗೂ ಶ್ರೀನಿವಾಸ್ ದಾಸ್ ಎಂಬುವವರಿಗೆ ಕಾನೂನುಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ. ಪಾಲಿಕೆ ಸ್ವತ್ತನ್ನು ನೆಲಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಮುಂದಾಗಿದ್ದರೂ, ಅದನ್ನು ತಡೆಯುವ ಬದಲು ಎಆರ್‌ಒ ಸುಜಾತ ದಾಖಲೆಗಳನ್ನು ದೃಢೀಕರಿಸದೆ ಖಾತೆ ಮಾಡಿಕೊಟ್ಟಿದ್ದಾರೆ. ಇದರಿಂದ ಮಾರುಕಟ್ಟೆ ಮೌಲ್ಯದ ಪ್ರಕಾರ ಪಾಲಿಕೆಗೆ 5 ಕೋಟಿ ರೂ.ಗೆ ಹೆಚ್ಚಿನ ಸ್ವತ್ತು ಕೈಬಿಟ್ಟಿದೆ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದೂರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪಾಲಿಕೆಯ ಆಡಳಿತಾಧಿಕಾರಿ, ಮುಖ್ಯ ಆಯುಕ್ತ ಹಾಗೂ ವಿಶೇಷ ಆಯುಕ್ತ (ಕಂದಾಯ) ಅವರಿಗೆ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸಿದ್ದೇನೆ. ಜತೆಗೆ ಈ ಸ್ವತ್ತನ್ನು ಪರಭಾರೆ ಮಾಡಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯ ಆಯುಕ್ತರು, ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಉದ್ಯಾನ ಒಳಗೊಂಡಿರುವ ಪೂರ್ಣ ಸ್ವತ್ತಿನ ಕುರಿತು ಪ್ರತ್ಯೇಕ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದ ವೇಳೆ ಸರ್ಕಾರಿ ಜಮೀನು ಉಳಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಜತೆಗೆ ಪಾರ್ಕ್ ಸ್ವತ್ತನ್ನು ಕಾನೂನು ಪ್ರಕಾರ ವಶಕ್ಕೆ ಪಡೆದು ಬೇಲಿ ಹಾಕುವಂತೆ ಪಾಲಿಕೆಗೆ ಆದೇಶಿಸಲಾಗಿತ್ತು. ಹೀಗಿರುವಾಗ ಸದರಿ ಸ್ವತ್ತನ್ನು ಖಾಸಗಿಯವರಿಗೆ ಹೇಗೆ ಜಮೀನು ಪರಭಾರೆ ಮಾಡಲಾಯಿತು ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಎನ್.ಆರ್.ರಮೇಶ್ ಪ್ರಶ್ನಿಸಿದ್ದಾರೆ.