ಪಿಒಪಿ ಗಣೇಶನ ಬಳಕೆ ನಿಷೇಧ

POP, Ganesha idol, sale, ban,
Published on


ನಗರದಲ್ಲಿ ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶನ ಬಳಕೆ ನಿಷೇಧಿಸಿದ್ದು, ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಬಳಕೆ ಮಾಡಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗೌರಿ-ಗಣೇಶ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಿಒಪಿ ಬಳಕೆ ಮಾಡಿರುವ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡುವುದು ಕಂಡುಬಂದರೆ ತಕ್ಷಣ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಬಾರಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿ ಮಾಡಿರುವ ಕಡೆಗಳಲ್ಲಿ ಈ ಬಾರಿಯೂ ಪರಿಶೀಲಿಸಬೇಕು. ತಯಾರಿಕೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಬೇಕು. ತಯಾರಿಕೆ ಮತ್ತು ಮಾರಾಟಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆ ಅನ್ವಯ ಮಾರಾಟಗಾರರು ಮತ್ತು ತಯಾರಕರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಪ್ರಚಾರವನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳನ್ನು ನಮ್ಮ ಅಧಿಕಾರಿ ವರ್ಗದವರು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ನಗರಪಾಲಿಕೆ, ಪುರಸಭೆ ಮತ್ತು ನಗರಸಭೆ ಮಟ್ಟದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಿ, ಗಣಪತಿ ವಿಸರ್ಜನೆಗೆ ಅವಕಾಶವನ್ನು ನೀಡಬೇಕು. ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕೆರೆ, ಕಟ್ಟೆಗಳ ಬಳಿ ಹೊಂಡವನ್ನು ನಿರ್ಮಿಸಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು. ವಿಸರ್ಜನೆ ಸಂದರ್ಭದಲ್ಲಿ ಮೂರ್ತಿಗಳಿಗೆ ಬಳಕೆ ಮಾಡಿರುವ ಅಲಂಕಾರಿಕ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಗಣೇಶ ಮೂರ್ತಿ ಕೂರಿಸುವ ಜಾಗಗಳಲ್ಲಿ ಶಬ್ದಮಾಲಿನ್ಯ ಆಗದಂತೆ ಕ್ರಮ ವಹಿಸಬೇಕು ಮತ್ತು ಧ್ವನಿವರ್ಧಕಗಳನ್ನು ಅಳವಡಿಸಲು ಸಂಬಂಧಿತ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿ ಭಕ್ತಿಗೀತೆ ಅಥವಾ ಗೀತಾ ಗಾಯನಗಳನ್ನು ಪ್ರಚಾರ ಮಾಡದಂತೆ ಸೂಚಿಸಬೇಕು ಎಂದರು.

4 ರಿಂದ 5 ಅಡಿ ಒಳಗೆ ಗಣಪತಿ ಮೂರ್ತಿಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಉಪ ಪೊಲೀಸ್ ಆಯುಕ್ತೆ ಎಸ್. ಜಾನ್ಹವಿ, ಉಪವಿಭಾಗಾಧಿಕಾರಿ ರಕ್ಷಿತ್, ಪರಿಸರ ಅಧಿಕಾರಿ ಶುಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net