ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ ನಿಷೇಧ

IMG-20240106-WA0129
ಏಕ ಬಳಕೆ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಕುರಿತಂತೆ ಪಾಂಡವಪುರ ಪುರಸಭೆ ವತಿಯಿಂದ ಶಾಲಾ ವಿದ್ಯಾರ್ಥಿಗಳ ಜಾಥಾದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಶಫೀನಾಜ್, ಎನ್.ಮಹದೇವಪ್ಪ, ತ್ರಿವೇಣಿ, ಮಂಜುಳಾ ಇತರರು ಇದ್ದರು.
Published on

ಪಾಂಡವಪುರ: ಪಟ್ಟಣದ ಪುರಸಭೆ ವತಿಯಿಂದ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಕುರಿತಂತೆ ಶಾಲಾ ವಿದ್ಯಾರ್ಥಿಗಳ ಜಾಥಾ ಮೂಲಕ ಅರಿವಿನ ಕಾರ್ಯಕ್ರಮ ಶನಿವಾರ ನಡೆಯಿತು.

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಸೂಚನೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳ ಅನುಸರಣೆ 202ರ ಅನ್ವಯ ಪಟ್ಟಣಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪುರಸಭೆ ಪರಿಸರ ಇಂಜಿನಿಯರ್ ಶಫೀನಾಜ್ ತಿಳಿಸಿದರು.

ನಿಷೇಧಿತ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು, ಶಾಪಿಂಗ್ ಕೇಂದ್ರಗಳು, ಸಿನಿಮಾ ಮಂದಿರಗಳು, ಮನೆಗಳು, ಪ್ರವಾಸೋದ್ಯಮ ಸ್ಥಳಗಳು, ಶಾಲಾ-ಕಾಲೇಜುಗಳು, ಕಚೇರಿ, ಸಂಕೀರ್ಣಗಳು, ಆಸ್ಪತ್ರೆಗಳು, ಇತರ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಸಂಗ್ರಹಣೆ, ಬಳಕೆ ಮತ್ತು ಮಾರಾಟ ನಿಲ್ಲಿಸುವಂತೆ ಜಾಥಾ ಹಾಗೂ ಪ್ರಚಾರದ ಮೂಲಕ ಅರಿವು ಮೂಡಿಸಲಾಗಿದೆ ಎಂದರು.

ಜತೆಗೆ ಪುರಸಭೆ ವತಿಯಿಂದ ಪಟ್ಟಣಾದ್ಯಂತ ಪ್ರತಿನಿತ್ಯ ದಾಳಿ ನಡೆಸಿ ನಿಷೇಧಿತ ವಸ್ತುಗಳ ಮಾರಾಟ, ಬಳಕೆ, ದಾಸ್ತಾನು ಮಾಡದಂತೆ ಕ್ರಮವಹಿಸಲಾಗುತ್ತಿದೆ. ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಂಡು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಮತ್ತು ಪರಿಸರ ಸ್ನೇಹಿ ವಸ್ತುಗಳ ಬಗ್ಗೆ ಅರಿವು ಮೂಡಿಸಿ ವಿಜೇತ 15 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು ಎಂದು ತಿಳಿಸಿದರು.
ಪಟ್ಟಣದ ಮುಖ್ಯರಸ್ತೆಗಳು, ಅಂಗಡಿ ಮಳಿಗೆಗಳು ಹಾಗೂ ಜನನಿಬಿಡ ರಸ್ತೆಗಳು, ಬಸ್ ಸ್ಟ್ಯಾಂಡ್ ಮೂಲಕ ಜಾಥಾ ನಡೆಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಮಹದೇವಪ್ಪ, ಶಿಕ್ಷಕರಾದ ತ್ರಿವೇಣಿ, ಮಂಜುಳಾ, ಪ್ರಕಾಶ್, ಮಹೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net