

ಮಂಡ್ಯ: ಕರ್ನಾಟಕ ಸರ್ಕಾರದ ಹೆಸರು ಮತ್ತು ಲಾಂಛನವನ್ನು ಖಾಸಗಿ ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಧೀನ ಕಚೇರಿಗಳಲ್ಲಿ ಮಾಸಿಕ ಬಾಡಿಗೆ ಆಧಾರದ ಮೇಲೆ ಗುತ್ತಿಗೆ, ಹೊರಗುತ್ತಿಗೆಯಲ್ಲಿ ಪಡೆದ ವಾಹನಗಳ ಮೇಲೆ ಕರ್ನಾಟಕ ಸರ್ಕಾರದ ಸೇವೆಯಲ್ಲಿ ಎಂಬ ಹೆಸರು ಮತ್ತು ಸರ್ಕಾರದ ಲಾಂಛನವನ್ನು ಬಳಸುತ್ತಿರುವ ಕುರಿತು ಎಂಎಲ್‌ಸಿ ಮಧು ಜಿ.ಮಾದೇಗೌಡ ವಿಧಾನ ಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಸಾರಿಗೆ ಇಲಾಖೆಯ ಎಲ್ಲ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ಅವರ ವಿಭಾಗದ ಕಚೇರಿಗಳ ವ್ಯಾಪ್ತಿಯಲ್ಲಿ ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಎಲ್ಲ ಇಲಾಖೆ, ನಿಗಮ-ಮಂಡಳಿ, ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಉಪಯೋಗಿಸುವ ಯಾವುದೇ ಖಾಸಗಿ ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರು, ಚಿಹ್ನೆ ಅಥವಾ ಲಾಂಛನಗಳನ್ನು ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಅಳವಡಿಸಿಕೊಳ್ಳುವಂತಿಲ್ಲ. ಅಲ್ಲದೆ, ವಾಹನಗಳ ಮೇಲೆ ದೀಪ ಅಳವಡಿಸುವುದು ಹಾಗೂ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಸಂಘ-ಸಂಸ್ಥೆಗಳ ಹೆಸರು ಅಳವಡಿಸುವಂತಿಲ್ಲ. ಈ ರೀತಿ ಅಳವಡಿಸಿಕೊಂಡಿರುವುದು ಕಂಡುಬಂದಲ್ಲಿ ನೋಂದಣಿ ಫಲಕ, ಸ್ಥಳ ಸಮೇತ ಚಿತ್ರ ತೆಗೆದು ವಾಟ್ಸ್‌ಆ್ಯಪ್ ಸಂಖ್ಯೆ: 9449863459 ಗೆ ಕಳುಹಿಸಿದರೆ ಅಂತಹ ವಾಹನ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದ್ದಾರೆ.