

ಗಂಗಾವತಿ: ಪ್ರಸಕ್ತ ಸಾಲಿನ ಗೌರಿ ಗಣೇಶ ಹಬ್ಬಕ್ಕೆ ಅದ್ದೂರಿ ತಯಾರಿ ನಡೆದಿದ್ದು, ಪರಿಸರ ಸ್ನೇಹಿ ಗಣಪಗಿಂತ ಪ್ಲಾಸ್ಟರ್ ಆ್ ಪ್ಯಾರಿಸ್ ಗಣೇಶನಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
2005ರ ಗಣೇಶೋತ್ಸವದಲ್ಲಿ ಗಲಾಟೆ ನಡೆದಿದ್ದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದ್ದು, ಮೂರ್ತಿ ಪ್ರತಿಷ್ಠಾಪಿಸುವರ ಸಂಖ್ಯೆಯೂ ಹೆಚ್ಚಾಯಿತು. ನಗರದಲ್ಲಿ 200, ಗ್ರಾಮೀಣ ಭಾಗದಲ್ಲಿ 240 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಅಂದಾಜಿದ್ದು, ಈಗಾಗಲೇ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಗಣೇಶ ಹಬ್ಬ, ಈದ್ ಮಿಲಾದ್ ಒಂದೇ ವಾರದಲ್ಲಿ ಬಂದಿದ್ದರಿಂದ ಪೊಲೀಸರು ಹೈಅಲರ್ಟ್ ಆಗಿದ್ದು, ಶಾಂತಿಸಭೆ ಮೂಲಕ ಎರಡೂ ಕೋಮಿನವರಿಗೆ ಸಾಮರಸ್ಯದ ಪಾಠ ಮಾಡಿದ್ದಾರೆ. ನಗರ ಪ್ರಮುಖ ವೃತ್ತ ಸೇರಿ ಓಣಿಗಳಲ್ಲೂ ಗಣೇಶನ ಅಬ್ಬರ ಹೆಚ್ಚಾಗಲಿದ್ದು, ಸಂಘಟನೆ ಸಾಮರ್ಥ್ಯಕ್ಕೆ ತಕ್ಕಂತೆ ಅಲಂಕಾರವೂ ನಡೆದಿದೆ. ತರಹೇವಾರಿ ಗಣೇಶ ತಯಾರಿಕೆ ತಿಂಗಳಿಂದ ಶುರುವಾಗಿದ್ದು, ಪಿಒಪಿಯದ್ದೇ ಅಬ್ಬರ ಹೆಚ್ಚಾಗಿದೆ.
ಬಹು ಬೇಡಿಕೆ:
ಪರಿಸರ ಸ್ನೇಹಿ ಗಣೇಶ ತಯಾರಿಕೆಗೆ ಚಿತ್ರಗಾರ ಕುಟುಂಬ ಸಿದ್ಧವಿದ್ದರೂ, ಮುಂಗಡ ನೀಡುವರಿಲ್ಲ. ಹೀಗಾಗಿ ಪಿಒಪಿ ಗಣೇಶ ಮಾರಾಟವನ್ನೇ ಅವಲಂಬಿಸಿದ್ದು, ಸೂರತ್, ಹೈದರಾಬಾದ್, ಪೂನಾದಿಂದ ಮೌಲ್ಡ್‌ಗಳು ಬಂದಿವೆ. 1500 ರೂ.ಗಳಿಂದ 80ಸಾವಿರ ರೂ.ವರೆಗಿನ ಗಣೇಶ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿದ್ದು, ಚಿತ್ರಗಾರ ಕುಟುಂಬ ಬಣ್ಣದ ಅಂತಿಮ ಸ್ಪರ್ಶ ನೀಡುತ್ತಿವೆ. 1.5 ಅಡಿಯಿಂದ 20ಅಡಿವರೆಗಿನ ಮೂರ್ತಿಗಳು ಸದ್ಯಕ್ಕೆ ಲಭ್ಯವಿದ್ದು, ಶೇ.60 ಗಣೇಶ ಮೂರ್ತಿಗಳು ಮಾರಾಟವಾಗಿವೆ. ಪರಿಸರ ಸ್ನೇಹಿ ಗಣೇಶಗಿಂತ ಪಿಒಪಿಗೆ ಡಿಮಾಂಡ್ ಹೆಚ್ಚಾಗಿದ್ದು, ಬಹುತೇಕ ಸಂಘಟನೆಗಳು ಮುಂಗಡ ನೀಡಿವೆ. ಸಿಟಿ ಮಾರುಕಟ್ಟೆ ಪ್ರಾಂಗಣ, ಗುಂಡಮ್ಮ ಕ್ಯಾಂಪ್, ಮುರಹರಿ ನಗರ ಸೇರಿ 8 ಭಾಗದಲ್ಲಿ ಮೂರ್ತಿ ತಯಾರಿಕೆ ಮುಂದುವರಿದಿದೆ.
ಕ್ರಮಕ್ಕೆ ಮುಂದಾಗದ ಅಧಿಕಾರಿಗಳು:
ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣೇಶ ಮೂರ್ತಿ ಬಳಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿರುವ ಆದೇಶ ಜಿಲ್ಲಾಡಳಿತಕ್ಕೆ ಕಳುಹಿಸಿದೆ. ಪಿಒಪಿ ಮೂರ್ತಿ ಮಾರಾಟ ಮಾಡದಂತೆ ನಗರಸಭೆ ಸಿಬ್ಬಂದಿ ಈಗಾಗಲೇ ತಯಾರಕರಿಗೆ ಸೂಚನೆ ನೀಡಿದ್ದು, ಲಿಖಿತವಾಗಿ ಆದೇಶಿಸಿದೆ. ಜನಪ್ರತಿನಿಧಿಗಳ ಭರವಸೆ ಮೇಲೆ ದುಬಾರಿ ದರದ ಪಿಒಪಿ ಗಣೇಶಗಳನ್ನು ಈಗಾಗಲೇ ಆಮದು ಮಾಡಿಕೊಳ್ಳಲಾಗಿದ್ದು, ಕೆಲವೊಂದು ಸ್ಥಳೀಯವಾಗಿ ತಯಾರಿಸಲಾಗಿದೆ. ಶಾಂತಿಸಭೆ ಮೂಲಕವೂ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಜಪ್ತಿ ಮಾಡಿದ್ರೆ ಸಂಘಟನೆಗಳ ಗಲಾಟೆ ಬೇರೆ, ಇನ್ನೊಂದೆಡೆ ಹಾಲಿ, ಮಾಜಿ ಜನಪ್ರತಿನಿಧಿಗಳ ಮೌಖಿಕ ಸೂಚನೆ. ಹೀಗಾಗಿ ಅಧಿಕಾರಿಗಳು ಗೊಂದಲದಲ್ಲಿದ್ದು, ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಪರ, ವಿರೋಧ ನಡುವೆಯೂ ಪಿಒಪಿ ಗಣೇಶ ಸ್ವಾಗತಕ್ಕೆ ತಾಲೂಕು ಸಜ್ಜಾಗಿದೆ.
ಇದನ್ನು ಓದಿ: ಬಿಬಿಎಂಪಿಯಿಂದ ಪಿಒಪಿ ಗಣೇಶ ಮೂರ್ತಿಗಳ ಜಪ್ತಿ
ಪರವಾನಗಿಗೆ ಏಕಗವಾಕ್ಷಿ ಪದ್ಧತಿ: ಗಣೇಶ ಮೂರ್ತಿ ವಿಸರ್ಜನೆಗೆ ದಾಸನಾಳ, ಚಿಕ್ಕಜಂತಕಲ್ ಮತ್ತು ದೇವಘಾಟ ತುಂಗಭದ್ರಾ ನದಿ ಬಳಿ ನಗರಸಭೆ ವ್ಯವಸ್ಥೆ ಮಾಡಿದ್ದು, ಮನೆಮನೆಗಳ ಗಣೇಶಗಳ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದೆ. ಪ್ರತಿಷ್ಠಾಪನೆ ಸಮಿತಿ ಅನುಕೂಲಕ್ಕಾಗಿ ಪರವಾನಗಿಗೆ ಏಕಗವಾಕ್ಷಿ ಪದ್ಧತಿಗೆ ತಾಲೂಕಾಡಳಿತ ವ್ಯವಸ್ಥೆ ಮಾಡಿದೆ. ಪೊಲೀಸ್, ನಗರಸಭೆ, ಅಗ್ನಿಶಾಮಕ, ಜೆಸ್ಕಾಂ ಮತ್ತು ಕಂದಾಯ ಸಿಬ್ಬಂದಿ ಒಂದೆಡೆ ಕುಳಿತು ಪ್ರತಿಷ್ಠಾಪನೆ ಸಮಿತಿಗಳಿಗೆ ಪರವಾನಗಿ ನೀಡುತ್ತಿವೆ. ಸಮಿತಿಯ ಐವರನ್ನು ಸಾಕ್ಷಿಯನ್ನಾಗಿ ಪಡೆಯುತ್ತಿದ್ದು, ಆಧಾರ್ ಕಾರ್ಡ್ ಸಮೇತ ಅಗತ್ಯ ದಾಖಲೆ ನೀಡುವುದು ಕಡ್ಡಾಯ. ಡಿಜೆ ಬಳಕೆ ನಿಷೇಧಿಸಿದ್ದರೂ, ಕೆಲ ಸಂಘಟನೆಗಳು ದುಬಾರಿ ಹಣ ಮುಂಗಡ ನೀಡಿ, ಬೆಳಗಾವಿ, ಹುಬ್ಬಳ್ಳಿಯಿಂದ ಡಿಜೆ ತರಿಸಲು ನಿರ್ಧರಿಸಿವೆ.
ಷರತ್ತುಗಳು ಲೆಕ್ಕಕ್ಕಿಲ್ಲ: ಪ್ರತಿಷ್ಠಾಪನೆ ಸಮಿತಿಯವರು ನಗರಸಭೆಯಿಂದ ವಿಧಿಸಿರುವ 22 ಷರತ್ತುಗಳನ್ನು ಕಡ್ಡಾಯ ಪಾಲಿಸಬೇಕಿದೆ. ಪಿಒಪಿ ಗಣೇಶ ಮೂರ್ತಿ ಬಳಸದಂತೆ ಷರತ್ತಿನಲ್ಲಿದ್ದರೂ ಗಂಭೀರತೆಯಿಲ್ಲ. ಪೇಪರ್, ಪ್ಲ್ಯಾಸ್ಟಿಕ್, ಬಂಟಿಂಗ್ಸ್, ಬ್ಯಾನರ್ ಬಳಕೆ ನಿಷೇಧಿಸಲಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಪಡಿಸುವಂತಿಲ್ಲ, ಅನಧಿಕೃತ ವಿದ್ಯುತ್ ಜೋಡಣೆಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ವಿಸರ್ಜನೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿರುವ ಷರತ್ತು ಪಾಲಿಸುವುದು ಕಡ್ಡಾಯ. ಎಲ್ಲವನ್ನೂ ಪ್ರತಿಷ್ಠಾಪನೆ ಸಮಿತಿ ಪಾಲಿಸುವುದು ಅನುಮಾನವಾಗಿದ್ದು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.
ಪಿಒಪಿ ಗಣೇಶ ಮೂರ್ತಿ ಬಳಕೆ ನಿಷೇಧವಿದ್ದು, ಪರಿಸರ ಸ್ನೇಹಿ ಮೂರ್ತಿಗೆ ಪ್ರತಿಷ್ಠಾಪನೆ ಸಮಿತಿಯವರು ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಪರವಾನಗಿ ನೀಡುವಾಗಲೂ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಮಿತಿಗೆ ಸಹಕರಿಸಲಾಗುತ್ತಿದೆ.ಆರ್. ವಿರೂಪಾಕ್ಷಮೂರ್ತಿ
ನಗರಸಭೆ ಪೌರಾಯುಕ್ತ, ಗಂಗಾವತಿ
ಕಳೆದ ವರ್ಷ ಗಣೇಶ ಹಬ್ಬದಲ್ಲಿ ಮೂರ್ತಿಗಳು ಅಷ್ಟೊಂದು ಮಾರಾಟವಾಗಿರಲಿಲ್ಲ. ಈ ಬಾರಿ ಮೊದಲೇ ಮುಂಗಡ ನೀಡಿ ಗಣೇಶ ಮೂರ್ತಿಗಳನ್ನು ಸಮಿತಿಯವರು ಪಡೆದುಕೊಂಡಿದ್ದಾರೆ. ಪ್ರತಿಷ್ಠಾಪನೆ ಸಮಿತಿ ಬೇಡಿಕೆಯಂತೆ ಮೂರ್ತಿ ತಯಾರಿಸಿಕೊಡಲಾಗುತ್ತಿದೆ.ಅಶೋಕ
ಪಿಒಪಿ ಗಣೇಶ ಮೂರ್ತಿ ತಯಾರಕ