

ಶಿವಮೊಗ್ಗ: ಹಮಾಸ್ ಉಗ್ರರಿಗೆ ಬೆಂಬಲ ನೀಡುವ ಬಹುತ್ವ ಕರ್ನಾಟಕ ಸಂಘಟನೆಯನ್ನು ರಾಜ್ಯ ಸರ್ಕಾರ ತಕ್ಷಣವೇ ನಿಷೇಧಿಸಬೇಕು. ಸಂಘಟನೆ ನಾಯಕತ್ವ ವಹಿಸಿದವರನ್ನು ಬಂಧಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.
ಗಾಜಾ ಪಟ್ಟಿಯಲ್ಲಿ ಹಮಾಸ್ ರಾಕ್ಷಸಿ ಕೃತ್ಯವೆಸಗಿದೆ. ರಾಕ್ಷಸರಿಗೆ ಶಕ್ತಿ ಕೊಡುವ ಕೆಲಸವನ್ನು ಇಲ್ಲಿನ ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ಸರ್ಕಾರದ ಕುಮ್ಮಕ್ಕು ಇಲ್ಲದೆ ಬೆಂಗಳೂರಿನಲ್ಲಿ ಉಗ್ರರ ಪರವಾಗಿ ಸಂಘಟನೆ ಹೆಸರಲ್ಲಿ ಪ್ರತಿಭಟನೆ ಮಾಡಲು ಸಾಧ್ಯವಿದೆಯಾ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಕ್ಷಸರಿಗೆ ಶಕ್ತಿ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಲಿ ಪಡೆದಿದ್ದು ಇದೇ ಉಗ್ರರಲ್ಲವೇ? ಆದರೆ ಮತ್ತೂ ಅವರಿಗೇ ಏಕೆ ಶಕ್ತಿ ಕೊಡುತ್ತಿದ್ದೀರಾ? ರಾಷ್ಟ್ರದೋಹ್ರಿ ಕೃತ್ಯಕ್ಕೆ ಏಕೆ ಕುಮ್ಮಕ್ಕು ನೀಡುತ್ತೀದ್ದೀರಿ ? ಯಾವುದೇ ಕಾರಣಕ್ಕೂ ಉಗ್ರರಿಗೆ ಕುಮ್ಮಕ್ಕು ನೀಡುವ ಕೆಲಸ ಆಗಬಾರದು. ಈ ಮೂಲಕ ಹಿಂದು ಸಮಾಜಕ್ಕೆ ಅವಮಾನಿಸುವ ಕೆಲಸ ಮಾಡಬಾರದು ಮನವಿ ಮಾಡಿದರು.
ಇಡೀ ವಿಶ್ವವೇ ಇಸ್ರೇಲ್ ಪರವಾಗಿ ನಿಂತರೇ ಕಾಂಗ್ರೆಸ್ ಮಾತ್ರ ಉಗ್ರರ ಪರವಾಗಿ ನಿಂತಿತ್ತು. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಂದ ಹಿಡಿದು ರಾಜ್ಯ ನಾಯಕರೂ ಉಗ್ರರಿಗೆ ಬೆಂಬಲ ನೀಡಿದರು. ಇದರ ಪರಿಣಾಮ ಉಗ್ರರ ಪರವಾಗಿ ಬಹುತ್ವ ಕರ್ನಾಟಕ ಸಂಘಟನೆ ಹೆಸರಲ್ಲಿ ಕೆಲವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಹಿಂದುಗಳ ಪರವಾಗಿ ಮಾತನಾಡಿದರೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಸುಮೊಟೋ ಕೇಸ್ ಹಾಕುತ್ತೀರಿ. ಆದರೆ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಯರ್ ಎಸ್.ಶಿವಕುಮಾರ್, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಎಸ್.ಜಿ.ಬಾಲು, ಕೆ.ವಿ.ಅಣ್ಣಪ್ಪ ಇದ್ದರು.