ಹಾಲು ಖರೀದಿ ಆತಂಕ ಬೇಡ ; ಉತ್ಪಾದಕರಿಗೆ ಧೈರ್ಯ ತುಂಬಿದ ಬಮುಲ್

BAmul
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ಗ್ರಾಹಕರು ಬಳಸುತ್ತಿರುವ ಹಾಲು ಎಷ್ಟು ಸುರಕ್ಷಿತ. ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹೌದು, ಕೋವಿಡ್ ಆರಂಭಗೊಂಡ ನಂತರ ಹಾಲು ಸಂಗ್ರಹ ಮತ್ತು ಮಾರಾಟ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡಿದ್ದು, ರೈತರಿಂದ ಸಂಗ್ರಹಿಸುವ ಹಾಗೂ ಗ್ರಾಹಕರು ಖರೀದಿ ಮಾಡುವ ಎರಡೂ ಹಾಲು ಸುರಕ್ಷಿತವಾಗಿದ್ದು, ಆತಂಕಪಡಬೇಕಿಲ್ಲ ಎಂದು ಬಮುಲ್ ಸ್ಪಷ್ಟನೆ ನೀಡಿದೆ.

ಬಮುಲ್ ವ್ಯಾಪ್ತಿಯ ಬೆಂ.ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಾಲು ಸಂಗ್ರಹಕ್ಕೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹಾಲು ಕರೆಯುವ ಮುನ್ನ ಸ್ಯಾನಿಟೈಸರ್ ಬಳಕೆ, ಹಾಲನ್ನು ಸಂಘಕ್ಕೆ ಹಾಕುವ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಜತೆಗೆ, ಮಾಸ್ಕ್ ಧರಿಸಿಯೇ ಹೈನುಗಾರರು ಸಂಘದ ಆವರಣಕ್ಕೆ ಬರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದು, ಬಮುಲ್ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಹಾಲು ಸಂಗ್ರಹಿಸುವ ಪ್ರತಿ ಹಂತದಲ್ಲಿಯೂ ಸುರಕ್ಷತೆಗೆ ಕ್ರಮ ವಹಿಸಲಾಗಿದೆ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದೆ.

ಕೋವಿಡ್ ಇದ್ದರೆ ಖರೀದಿ ಇಲ್ಲ : ಪ್ರಮುಖವಾಗಿ ಎಲ್ಲ ಹೈನುಗಾರರು ಕೋವಿಡ್‌ಗೆ ತುತ್ತಾಗುವುದಿಲ್ಲ. ಒಂದು ವೇಳೆ ತುತ್ತಾದ ಹೈನುಗಾರರು ಯಾವುದೇ ಕಾರಣಕ್ಕೂ ಹಾಲನ್ನು ಸಂಘಕ್ಕೆ ತರುವುದು ಬೇಡ. ಆ ರಾಸುಗಳ ಹಾಲನ್ನು ಕನಿಷ್ಠ 10 ದಿನ ಖರೀದಿ ಮಾಡದಂತೆ ಎಲ್ಲ ಎಂಪಿಸಿಎಸ್‌ಗಳಿಗೆ ಈಗಾಗಲೇ ಸೂಚಿಸಲಾಗಿದೆ. ಆದ್ದರಿಂದ ಹಾಲು ಖರೀದಿ ಮಾಡುವ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಬಮುಲ್ ತಿಳಿಸಿದೆ.

ರೈತರಿಗೆ ನೆರವು : ಕೋವಿಡ್ ತಗುಲಿದ ಕುಟುಂಬದವರ ಹಸುಗಳ ಹಾಲನ್ನು 10 ದಿನ ಖರೀದಿಸುವುದಿಲ್ಲ. ಈ ವೇಳೆ ರೈತರಿಗೆ ಆಗುವ ನಷ್ಟ ತಪ್ಪಿಸಲು ಈ ಬಾರಿಯೂ ಆರ್ಥಿಕ ನೆರವು ನೀಡಲು ಬಮುಲ್ ಮುಂದಾಗಿದೆ. ರೈತರು ಎಂಪಿಸಿಎಸ್‌ಗೆ ಪೂರೈಕೆ ಮಾಡುತ್ತಿದ್ದ ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ಶೇ.75ರಷ್ಟು ಪರಿಹಾರ ನೀಡಲು ನಿರ್ಧರಿಸಿದೆ. ಇದರಲ್ಲಿ ಶೇ.50 ಹಣವನ್ನು ಬಮುಲ್ ಭರಿಸಿದರೆ, 25ರಷ್ಟನ್ನು ಆಯಾಯ ಎಂಪಿಸಿಎಸ್ ತುಂಬಿಕೊಡುತ್ತದೆ. ಈ ಮೂಲಕ ರೈತರಿಗೆ ಆಗುವ ನಷ್ಟ ತಪ್ಪಿಸಲಾಗಿದೆ.

ನಷ್ಟದಲ್ಲಿ ಬಮುಲ್: ಕರೊನಾ ಹೊಡೆತಕ್ಕೆ ಬಮುಲ್ ತತ್ತರಿಸಿದೆ. ಹಾಲಿನ ಪೂರೈಕೆ ಪ್ರಮಾಣ ಹೆಚ್ಚಿದ್ದರೆ, ಖರೀದಿ ಪ್ರಮಾಣ ಇಳಿಕೆ ಆಗುತ್ತಿದೆ. ಇದರಿಂದ ಪ್ರತಿದಿನ 40-50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಇಂತಹ ಸನ್ನಿವೇಶದಲ್ಲೂ ಬಮುಲ್ ರೈತರಿಂದ ಖರೀದಿಸುವ ಹಾಲಿನ ಬೆಲೆ ಕಡಿಮೆ ಮಾಡಿಲ್ಲ. ಆದರೆ ಆಗುತ್ತಿರುವ ನಷ್ಟದಿಂದ ಹೊರಬರಲು ಆರ್ಥಿಕ ನೆರವು ನೀಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.

ಲಸಿಕೆ ನೀಡಿ :ಪ್ರತಿ ದಿನ ನೂರಾರು ಜನರೊಂದಿಗೆ ಎಂಪಿಸಿಎಸ್‌ಗಳ ಸಿಬ್ಬಂದಿ ಸಂಪರ್ಕದಲ್ಲಿ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಿಬ್ಬಂದಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಬಮುಲ್ ರೈತರಿಂದ ಸುರಕ್ಷಿತವಾಗಿ ಹಾಲು ಖರೀದಿ ಮಾಡುತ್ತಿದ್ದು, ಅಷ್ಟೇ ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ. ಈ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲ. ಅಲ್ಲದೆ, ಕೋವಿಡ್ ತಗುಲಿದ ರೈತರ ಮನೆಗಳಿಂದ 10 ದಿನ ಹಾಲು ಖರೀದಿಸುತ್ತಿಲ್ಲ. ಈ ವೇಳೆ ರೈತರಿಗಾಗುವ ನಷ್ಟದಲ್ಲಿ ಶೇ.75ರಷ್ಟು ಪರಿಹಾರ ನೀಡಲು ನಿರ್ಧರಿಸಲಾಗಿದೆ. ನರಸಿಂಹಮೂರ್ತಿ, ಅಧ್ಯಕ್ಷ, ಬಮುಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net