ಸಹಕಾರಿ ಸಂಸ್ಥೆ ಇರುವ ಊರು ಉದ್ಧಾರ - ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿಮತ - ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ ಕಟ್ಟಡ ಉದ್ಘಾಟನೆ

PTR_20 JUL_ 1
Published on

ಪುತ್ತೂರು: ಸಹಕಾರಿ ಸಂಸ್ಥೆ ಇರುವ ಗ್ರಾಮ ಉದ್ಧಾರವಾಗುತ್ತದೆ ಎಂಬುದಕ್ಕೆ ನಮ್ಮ ಜಿಲ್ಲೆ ದೃಷ್ಟಾಂತವಾಗಿದೆ. ಬ್ಯಾಂಕ್‌ಗಳು ವಿಲೀನ ಆಗುತ್ತಿರುವ ದಿನದಲ್ಲಿ ಸಹಕಾರಿ ಸಂಘ ಗ್ರಾಮದಲ್ಲಿ ಶಾಖೆಯನ್ನು ತೆರೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸ್ವಂತ ಕಟ್ಟಡವನ್ನು ಹೊಂದಿ ರೈತರಿಗೆ ಸೇವೆ ನೀಡುತ್ತಿವೆ. ಸಹಕಾರಿ ಸಂಸ್ಥೆಗಳು ಬಲಾಢ್ಯವಾಗಿದ್ದು, ರೈತರ ಬೇಡಿಕೆಗಳನ್ನು ಪೂರೈಸಲು ಸಶಕ್ತವಾಗಿವೆ. ಸಹಕಾರಿ ಸಂಘದಲ್ಲಿ ಕಳೆದ ೨೮ವರ್ಷಗಳಿಂದ ಕೃಷಿ ಸಾಲ ವಸೂಲಾತಿ ಎಂಬ ಪದ ಬಳಕೆಯಾಗದೆ, ಶೇ.೧೦೦ರಷ್ಟು ಮರುಪಾವತಿಯಾಗಿದೆ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.


ಶನಿವಾರ ಬಿಳಿಯೂರುಕಟ್ಟೆ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕೇಂದ್ರ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಡಳಿತ ಕಚೇರಿ ಉದ್ಘಾಟಿಸಿದರು. ಸಭಾಭವನ ಉದ್ಘಾಟನೆಯನ್ನು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಭದ್ರತಾ ಕೊಠಡಿ ಉದ್ಘಾಟನೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು, ನೂತನ ಗೋದಾಮು ಕೊಠಡಿಯನ್ನು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನಡೆಸಿದರು.
ಸಂಘದ ಮಾಜಿ ಅಧ್ಯಕ್ಷರು, ಮಾಜಿ ಮುಖ್ಯ ಕಾರ್ಯನಿರ್ವಹಣಾಽಕಾರಿಗಳನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ. ಸತೀಶ್ ಗೌಡ ಒಳಗುಡ್ಡೆ ವಹಿಸಿದ್ದರು.

ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ಬಿ. ಜಯರಾಮ ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬೆಳಿಯೂರುಕಟ್ಟೆ ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಪ್ರವೀಣ್ ಚಂದ್ರ ಆಳ್ವ ಮುಂಡೇಲು, ಬಲ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಮೇಶ್ವರಿ ಬಿ. ಆರ್., ಕರಾವಳಿ ಅಭಿವೃದ್ಧಿ ಪ್ರಾಽಕಾರ ಮಾಜಿ ಅಧ್ಯಕ್ಷ ಬಿ. ತಿಮ್ಮಪ್ಪ ಶೆಟ್ಟಿ ಚಣಿಲ, ನಗರಸಭಾ ಸದಸ್ಯೆ ಪೂರ್ಣಿಮಾ ಚೆನ್ನಪ್ಪ ಗೌಡ, ಸಹಕಾರಿ ಸಂಘದ ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಎ. ಎಂ. ಪ್ರಕಾಶ್ಚಂದ್ರ ಆಳ್ವ, ಕೆ. ಚಂದಪ್ಪ ಪೂಜಾರಿ, ನವೀನ್ ಕರ್ಕೇರ, ಪ್ರಮೋದ್ ಬಿ., ಅಂಬ್ರೋಸ್ ಡಿಸೋಜ, ಸುರೇಶ ಎನ್., ಸೀತಾರಾಮ ಗೌಡ ಬಿ. ಕೆ., ಶುಕವಾಣಿ, ವಲಯ ಮೇಲ್ವಿಚಾರಕ ವಸಂತ ಎಸ್. ಮತ್ತಿತರರು ಉಪಸ್ಥಿತರಿದ್ದರು.


ಸತೀಶ್ ಗೌಡ ಒಳಗುಡ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಽಕಾರಿ ಕೆ. ಸೀತಾರಾಮ ಗೌಡ ಸನ್ಮಾನ ಪತ್ರ ವಾಚಿಸಿ, ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.


ಜಿಲ್ಲೆ ಆರ್ಥಿಕವಾಗಿ ಮುಂದುವರಿಯಲು ಸಹಕಾರಿ ಸಂಘಗಳು ಕಾರಣವಾಗಿದ್ದು, ಬ್ಯಾಂಕಿನ ಜತೆಗೆ ವ್ಯವಹಾರ ಹಾಗೂ ಕೃಷಿ ಬೆಳೆಯಬೇಕಾಗಿದೆ. ರೈತಾಪಿ ವರ್ಗದ ಹಾಗೂ ಸಹಕಾರಿ ಬಂಧುಗಳ ಸಹಕಾರದಿಂದ ವ್ಯವಸ್ಥಿತವಾಗಿ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಕೃಷಿಯಲ್ಲಿ ವ್ಯತ್ಯಾಸ ಆದರೆ ಜೀವನ ಕಷ್ಟಕರವಾಗಲಿದೆ, ಅಡಕೆಗೆ ಕುತ್ತು ಬಂದರೆ, ಜಿಲ್ಲೆಯ ರೈತರ ಸ್ಥಿತಿ ದುಸ್ತರವಾಗುತ್ತದೆ. ಪರ್ಯಾಯ ಬೆಳೆಗೆ ಚಿಂತನೆ ಮಾಡುವ ಬದಲು ಬೆಳೆಯ ಸಮಸ್ಯೆಗೆ ಪರಿಹಾರ ಕಾಣುವ ಕೆಲಸವಾಗಬೇಕು.
ಅಶೋಕ್ ಕುಮಾರ್ ರೈ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net