

ಆಲೂರು: ತಾಲೂಕಿನ ಬಾಳ್ಳುಪೇಟೆ-ಮಾಗಲು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತುಂಬ ತಗ್ಗು ಗುಂಡಿಗಳೇ ತುಂಬಿವೆ. ಇದರಿಂದ ವಾಹನ ಸವಾರರ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಈ ರಸ್ತೆಯ ಬಹುತೇಕ ಕಡೆ ಜಲ್ಲಿಕಲ್ಲು ಹೊರಬಂದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಳ್ಳುಪೇಟೆಯಿಂದ_ ಮಾಗಲು ಪಟ್ಟಣ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಖಾಸಗಿ, ಶಾಲಾ ವಾಹನ, ಸಾರಿಗೆ ಬಸ್, ಲಾರಿ, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಗ್ರಾಮಸ್ಥರು ಹದಗೆಟ್ಟ ರಸ್ತೆಯ ಬಗ್ಗೆ ಹಲವು ಬಾರಿ ಸಂಬಂಧಿತ ಅಧಿಕಾರಿ ಮತ್ತು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು, ಹೊಸ ರಸ್ತೆ ನಿರ್ಮಿಸುವಂತೆ ಮನವಿ ಕೂಡ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಸಮಸ್ಯೆಗೆ ಪರಿಹಾರ ಯಾವಾಗ : ದಿನನಿತ್ಯ ವ್ಯಾಪಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ, ಬ್ಯಾಂಕ್‌ಗಳಿಗೆ, ನಾಡ ಕಚೇರಿಗೆ ಹಾಗೂ ಮುಂತಾದ ಕಾರ್ಯ ನಿಮಿತ್ತ ನಿತ್ಯ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೆ ಇಲ್ಲಿ ಸಂಚಾರ ಸಂಕಟ ಹೇಳತೀರದಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಒದಗಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಸ್ವಾತಂತ್ರೃ ಬಂದು 78 ವರ್ಷ ಕಳೆದರೂ ಇಂದಿಗೂ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಮಾತ್ರ ಕನಸಾಗಿಯೇ ಉಳಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಗ್ರಾಮೀಣ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧ್ಯ ಎಂದು ಎಲ್ಲ ಚುನಾಯಿತ ಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾರೆ. ಆದರೆ ಈ ರಸ್ತೆ ದುರಸ್ತಿ ಕಾರ್ಯಮಾತ್ರ ವಿಳಂಬವಾಗಿದೆ.