ಮತಪೆಟ್ಟಿಗೆಯಲ್ಲಿ ನಕಲಿ ಬ್ಯಾಲೆಟ್ ಪೇಪರ್!

FotoJet (2)
Published on

ಭಕ್ತರಹಳ್ಳಿ ಮತಗಟ್ಟೆ-2ರಲ್ಲಿ ಅಕ್ರಮ ಪರಾಜಿತ ಅಭ್ಯರ್ಥಿ ಚಿದಾನಂದಮೂರ್ತಿ ಆರೋಪ

ಶಿಡ್ಲಘಟ್ಟ: ಡಿ.8ರಂದು ನಡೆದ ಗ್ರಾಪಂ ಚುನಾವಣೆಯಲ್ಲಿ ಭಕ್ತರಹಳ್ಳಿ ಗ್ರಾಮದ ಮತಗಟ್ಟೆ-2ರಲ್ಲಿ ಮತದಾನದಲ್ಲಿ ಅಕ್ರಮ ನಡೆದಿದೆ. ಮತ ಎಣಿಕೆ ವೇಳೆ ಅಕ್ರಮವಾಗಿರುವುದು ಬಹಿರಂಗಗೊಂಡಿದೆ ಎಂದು ಪರಾಜಿತ ಅಭ್ಯರ್ಥಿ ಬಿ. ಚಿದಾನಂದಮೂರ್ತಿ ಗಂಭೀರ ಆರೋಪ ಮಾಡಿದರು.

ತಾಲೂಕಿನ ಭಕ್ತರಹಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತಗಟ್ಟೆ-2ರಲ್ಲಿ ಒಟ್ಟು 983 ಮತದಾನ ನಡೆದಿತ್ತು. ಡಿ.12ರಂದು ಮತ ಎಣಿಕೆ ನಡೆದಾಗ 980 ಬ್ಯಾಲೆಟ್ ಪೇಪರ್‌ಗಳಷ್ಟೆ ಇತ್ತು. ಜತೆಗೆ ಬ್ಯಾಲೆಟ್ ಪೇಪರ್‌ಗಳನ್ನೇ ಹೋಲುವ 18 ಹೆಚ್ಚುವರಿ ನಕಲಿ ಬ್ಯಾಲೆಟ್ ಪೇಪರ್‌ಗಳು ಕಂಡು ಬಂದಿವೆ ಎಂದು ದೂರಿದರು.

ಅಧಿಕಾರಿಗಳ ಕಾರ್ಯವೈಖರಿಗೆ ಅನುಮಾನ: ಮತದಾರರಿಗೆ ನೀಡಿದ ಮೂರು ಬ್ಯಾಲೆಟ್ ಪೇಪರ್‌ಗಳು ಏನಾದವು? ಜತೆಗೆ ಬ್ಯಾಲೆಟ್

ಪೇಪರ್ ಹೋಲುವ ಮತಪತ್ರಗಳು ಮತಪೆಟ್ಟಿಗೆ ಸೇರಿದ್ದಾದರೂ ಹೇಗೆ ಎಂದು ಚಿದಾನಂದಮೂರ್ತಿ ಪ್ರಶ್ನಿಸಿದರು. ಈ ಬಗ್ಗೆ ತಹಸೀಲ್ದಾರ್ ಹಾಗೂ ಮತ ಎಣಿಕೆ ಮಾಡಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ

ಸ್ಪಷ್ಟ ಉತ್ತರ ಸಿಗಲಿಲ್ಲ. ಬದಲಿಗೆ ನೀವು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದಷ್ಟೆ ಹೇಳಿ ದಿಕ್ಕುತಪ್ಪಿಸಿ ಮತ ಎಣಿಕೆ ಕಾರ್ಯ ಮುಗಿಸಿದರು ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಸಂಬಂಧಿಸಿದ ದಾಖ ಕೊಡುವಂತೆ ಕೇಳಿದ್ದಕ್ಕೆ ಚುನಾವಣಾಧಿಕಾರಿ ಮೇಲೆ ತಹಸೀಲ್ದಾರ್, ತಹಸೀಲ್ದಾರ್ ಮೇಲೆ ಚುನಾವಣಾಧಿಕಾರಿಗಳು ಬೆರಳು ತೋರಿಸಿ ಕಾಲಹರಣ ಮಾಡಿದರೆ ವಿನಹ ದಾಖಲೆ, ಮಾಹಿತಿ ಕೊಡಲಿಲ್ಲ ಎಂದು ಚಿದಾನಂದಮೂತಿ ದೂರಿದರು.

ಸೋಮವಾರ (ಡಿ.16) ತಹಸೀಲ್ದಾರರನ್ನು ಭೇಟಿಯಾಗಿ ದಾಖಲೆ ಕೇಳುತ್ತೇವೆ. ಕೊಡದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿದರು.

ತನಿಖೆಗೆ ಆಗ್ರಹ

ಮತದಾನದ ದಿನದಂದು ಮತಗಟ್ಟೆಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಂತೆ ಮಾಡಿದ್ದು, ಈಗ ಆ ಬಗ್ಗೆಯೂ ಅನುಮಾನಗಳು ಕಾಡುತ್ತಿವೆ. ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ಪೇದೆ ಪದೇಪದೆ ಕಿಟಕಿ ಬಳಿ ಬಂದು ಮತಗಟ್ಟೆಯಲ್ಲಿನ ಏಜೆಂಟರೊಬ್ಬರಿಗೆ ಮೊಬೈಲ್ ಕೊಟ್ಟು ಯಾರ ಬಳಿಯೋ ಮಾತನಾಡಲು ಅವಕಾಶ ಕಲ್ಪಿಸಿಕೊಡುತ್ತಿದ್ದ ಜತೆಗೆ ಅಕ್ರಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಚಿದಾನಂದಮೂರ್ತಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net