ಹೊನ್ನಾಳಿಯಲ್ಲಿ ಭರದಿಂದ ಸಾಗಿದ ಮತಪತ್ರ ಜೋಡಣೆ ಕಾರ್ಯ

Hnl Matapatra April 27
Published on

ಹೊನ್ನಾಳಿ: ಪಟ್ಟಣದ ಗಂಗಮ್ಮ ವೀರಭದ್ರಯ್ಯ ಶಾಸ್ತ್ರಿ ಐಟಿಐ ಕಾಲೇಜಿನಲ್ಲಿ ಇವಿಎಂಗೆ ಮತಪತ್ರ ಜೋಡಣೆ ಕಾರ್ಯ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ನೇತೃತ್ವದಲ್ಲಿ ಶನಿವಾರ ನಡೆಯಿತು.

ಚುನಾವಣಾ ಸಿಬ್ಬಂದಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ 245 ಮತಗಟ್ಟೆಗಳಿಗೂ ಮತಪತ್ರ ಜೋಡಣೆ ಕಾರ್ಯ ನಡೆಸಿದರು.

ಬಳಿಕ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಶನಿವಾರ ಬೆಳಗ್ಗೆ ವಿವಿಧ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್‌ರೂಂ ಬಾಗಿಲು ತೆರೆದು ಇವಿಎಂಗಳಲ್ಲಿ ಮತಪತ್ರ ಜೋಡಣೆ ಕುರಿತು ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿಕೊಡಲಾಯಿತು ಎಂದರು.

ಮತದಾನದ ವೇಳೆ ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡರೆ ಕೂಡಲೇ ದುರಸ್ತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಥವಾ ಬೇರೆ ಮತಯಂತ್ರಗಳನ್ನು ನೀಡುವುದಕ್ಕೆ ಸಿದ್ಧತೆಗಳು ನಡೆದಿವೆ ಎಂದರು.

ಈ ಬಾರಿ ಪ್ರತಿ ಮತಗಟ್ಟೆಗೆ ಎರಡು ಇವಿಎಂಗಳನ್ನು ಇರಿಸಲಾಗುತ್ತದೆ. ಒಂದು ಇವಿಎಂನಲ್ಲಿ 15, ಮತ್ತೊಂದು ಇವಿಎಂನಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ ಇರುತ್ತದೆ. ಎರಡು ಸಹ ಅಕ್ಕಪಕ್ಕದಲ್ಲಿರುತ್ತವೆ ಎಂದು ವಿವರಿಸಿದರು.

ಎರಡೂ ತಾಲೂಕಿನ 6 ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್ ಪಹರೆ ಒದಗಿಸಲಾಗಿದೆ. ಹಾಗಾಗಿ, ಹೊನ್ನಾಳಿ- ನ್ಯಾಮತಿ ತಾಲೂಕಿನ ಒಳಗೆ ಯವುದೇ ಅನಧಿಕೃತ ಹಣ ಬರುತ್ತಿಲ್ಲ ಎಂದರು.

ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ 2 ತಹಸೀಲ್ದಾರ್‌ಗಳಾದ ಗೋವಿಂದಪ್ಪ, ಸುರೇಶ್, ಉಪ ತಹಸೀಲ್ದಾರ್ ಮಂಜುನಾಥ್ ಇಂಗಳಗೊಂದಿ, ಚಂದ್ರಪ್ಪ, ರಾಜಸ್ವ ನಿರೀಕ್ಷಕರಾದ ಸಂತೋಷ್, ದಿನೇಶ್‌ಬಾಬು, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net