ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಎಸ್ಪಿ ಎಸ್. ಜಾಹ್ನವಿ, ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್, ಸಿಪಿಐ ಮಲ್ಲಪ್ಪ ಎಸ್. ಹೂಗಾರ ಹಾಗೂ ಇತರರಿದ್ದರು.
ಹೂವಿನಹಡಗಲಿ: ವಿದ್ಯಾರ್ಥಿಗಳು ಅರಿವಿಲ್ಲದಂತೆಯೇ ಸಹವಾಸ ದೋಷಗಳಿಂದ ದುಶ್ಚಟಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆ ದೂರ ಉಳಿಯಬೇಕು ಎಂದು ಎಸ್ಪಿ ಎಸ್. ಜಾಹ್ನವಿ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ನಡೆದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಮನಸ್ಥಿತಿ ಸ್ಥಿಮಿತ ಕಳೆದುಕೊಂಡು ಚಂಚಲತೆಯಿಂದ ಕೂಡಿ ಭಿನ್ನ ಅಭಿರುಚಿಯೊಂದಿಗೆ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿ, ಪ್ರೇಮ ಹಾಗೂ ಪ್ರಣಯದ ಹೆಸರಿನಲ್ಲಿ ವಂಚನೆಗೊಳಗಾಗುತ್ತಿದ್ದಾರೆ.
ಯಾರೇ ಮಾದಕ ವಸ್ತುಗಳ ಹವ್ಯಾಸವನ್ನು ಆರಂಭಿಸುವಂತೆ ಪ್ರೇರಣೆ ನೀಡಿದರೆ ಅವರಿಗೆ ‘ಡ್ರಗ್ಸ್ ಬೇಡ ಬ್ರೋ’ ಎಂದು ಹೇಳಿ. ಪೊಲೀಸರು ತಮ್ಮ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ತಮ್ಮ ಸಹಾಯಕ್ಕೆ ದಾವಿಸುತ್ತಾರೆ. ಗಾಂಜಾ ಅಥವಾ ಅಫೀಮು ಬೆಳೆಯುವವರ ಬಗ್ಗೆ ನಿಗಾ ವಹಿಸಿ, ಅಂತಹವರು ಕಂಡುಬಂದರೆ ಕೂಡಲೇ 1908 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.
ಶಾಸಕ ಕೃಷ್ಣನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳ ವ್ಯಸನವು ಯುವಜನತೆಯ ಬದುಕನ್ನು ಕಿತ್ತುಕೊಳ್ಳುವುದಲ್ಲದೆ ಅವರ ಮನೆಯನ್ನು ಕೂಡ ನಾಶ ಮಾಡುತ್ತದೆ ಎಂದರು. ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್, ಸಿಪಿಐ ಮಲ್ಲಪ್ಪ ಎಸ್. ಹೂಗಾರ, ಪಿಎಸ್‌ಐಗಳಾದ ಮಣಿಕಂಠ, ಅಶೋಕ, ಜಿ.ಕೆ. ಅಬ್ಬಾಸ್, ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ ರೆಡ್ಡಿ, ಪ್ರಭಾರ ಪ್ರಾಚಾರ್ಯ ಡಾ. ವೈ. ಚಂದ್ರಬಾಬು ಹಾಗೂ ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರರಿದ್ದರು.