ಶಿವಮಂತ್ರ ಬರೆದು ಗೋಪುರಕ್ಕೆ ಎಸೆದು ಭರ್ಕಿ ಸಮರ್ಪಣೆ

ಸಿರಗುಪ್ಪ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ಹೂವಿನ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಿರಗುಪ್ಪ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ಹೂವಿನ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
Published on
ಸಿರಗುಪ್ಪ: ತಾಲೂಕಿನಾದ್ಯಂತ ಶಿವ ದೇವಾಲಯಗಳಲ್ಲಿ ಭಕ್ತರು ಬೆಳಗ್ಗೆಯಿಂದ ಶಿವಲಿಂಗಕ್ಕೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಮಾಡಿದರು.
ಶಿವನಾಮ ಸ್ಮರಣೆ ಮಾಡುತ್ತ ಉಪವಾಸ ವ್ರತ ಆಚರಿಸಿದರು. ಸಾವಿರಾರು ಭಕ್ತರು ಕುಟುಂಬ ಸಮೇತ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನದಿತೀರದಲ್ಲಿ ಗಂಗೆ ಮತ್ತು ಮರಳಿನ ಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಡಿಯಿಂದ ಐತಿಹಾಸಿಕ ಶಂಭುಲಿಂಗೇಶ್ವರಸ್ವಾಮಿ ದರ್ಶನ ಪಡೆದುಕೊಂಡರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಕ್ಕಳು ಬೆಳಗ್ಗೆಯಿಂದ ಪಂಚಾಕ್ಷರಿ ಶಿವಮಂತ್ರವನ್ನು 108 ಹಾಗೂ 1008 ಬಾರಿ ಪಠಣೆ ಮಾಡುತ್ತಾ ಪೇಪರ್‌ಲ್ಲಿ ಬರೆದು ದೇವಸ್ಥಾನದ ಗೋಪುರದ ಮೇಲೆ ಎಸೆದು ಭಕ್ತಿ ಅರ್ಪಿಸಿದರು. ಪಟ್ಟಣದ ನೀಲಕಂಠೇಶ್ವರ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ನಗರೇಶ್ವರ ದೇವಸ್ಥಾನ, ಅಮೃತೇಶ್ವರ ದೇವಸ್ಥಾನ, ಕೊಟ್ಟೂರೇಶ್ವರ ದೇವಸ್ಥಾನ, ನಾಗಲಿಂಗೇಶ್ವರ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ, ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಬಸವಭವನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು. ಕೆಂಚನಗುಡ್ಡದ ಗಂಗಾಧರೇಶ್ವರ ದೇವಸ್ಥಾನ, ಪರ್ವತಮಲ್ಲಯ್ಯ ದೇವಸ್ಥಾನ, ಶಾಲಿಗನೂರಿನ ರಾಮಲಿಂಗೇಶ್ವರ ದೇವಸ್ಥಾನ, ತೆಕ್ಕಲಕೋಟೆಯ ವರವಿನ ಮಲ್ಲೇಶ್ವರ ದೇವಸ್ಥಾನ, ನೆಲ ಅಮರೇಶ ದೇವಸ್ಥಾನ, ರಾವಿಹಾಳ್ ಈಶ್ವರ ದೇವಸ್ಥಾನ, ಬಿ.ಎಂ.ಸೂಗೂರು ಗ್ರಾಮದ ಈಶ್ವರ ದೇವಸ್ಥಾನ, ಗಜಗಿನಹಾಳು ಬಸವೇಶ್ವರ ದೇವಸ್ಥಾನ, ಇಬ್ರಾಹಿಂಪುರ ಬಾಗೇವಾಡಿ ಬಸವೇಶ್ವರ ದೇವಸ್ಥಾನ, ಸಿರಿಗೇರಿಯ ನಾಗನಾಥೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net