ಬಿಸಿಯೂಟದಲ್ಲಿ ಹುಳು ಪಾಲಕರ ಆಕ್ರೋಶ

ತೊಗರಿ ಬೇಳೆಯಲ್ಲಿ ಹುಳು ಬಿದ್ದಿರುವುದು.
ತೊಗರಿ ಬೇಳೆಯಲ್ಲಿ ಹುಳು ಬಿದ್ದಿರುವುದು.
Published on
ಸಿರಗುಪ್ಪ: ತೆಕ್ಕಲಕೋಟೆ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ (ಬೋಯಕೇರಿ) ಶಾಲೆಯಲ್ಲಿ ಬಿಸಿಯೂಟಕ್ಕೆ ಹುಳು ಬಿದ್ದ ತೊಗರಿ ಬೇಳೆ ಬಳಸುತ್ತಿರುವುದು ಪತ್ತೆಯಾಗಿದ್ದು, ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಧ್ಯಾಹ್ನದ ಬಿಸಿಯೂಟದ ಸಾಂಬಾರಿನಲ್ಲಿ ಹುಳುಗಳು ಇರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಧಾವಿಸಿದ ಸಿಆರ್‌ಪಿ ತಿಮ್ಮನ ಗೌಡ, ಸಾಂಬಾರನ್ನು ಬದಲಾಯಿಸಿದ್ದರು. ಗುರುವಾರ ಪಿಎಂ ಪೋಷಣ್ ಸಹಾಯಕ ನಿರ್ದೇಶಕ, ಕ್ಷೇತ್ರ ಸಮನ್ವಯಾಧಿಕಾರಿ, ಬಿಆರ್‌ಪಿ, ಸಿಆರ್‌ಪಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯಗುರುಗಳ ನಿರ್ಲಕ್ಷೃ ಇದಕ್ಕೆ ಕಾರಣ. ಅಕ್ಕಿ ಹಾಗೂ ಬೇಳೆಯನ್ನು ಸ್ವಚ್ಛ ಮಾಡಲು ಅಡುಗೆ ಸಿಬ್ಬಂದಿಗೆ ಮುಖ್ಯಗುರು ಬಿಡುವುದಿಲ್ಲ. ಅಡುಗೆಗೆ ಬೇಕಾಗುವಷ್ಟನ್ನು ಮಾತ್ರ ಅಳೆದು ಕೊಡುತ್ತಾರೆ. ಇದರಿಂದ ಧಾನ್ಯಗಳನ್ನು ಮೊದಲೇ ಸ್ವಚ್ಛಗೊಳಿಸಲು ಸಾಧ್ಯವಾಗದೆ ಅವಘಡ ನಡೆದಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಅಕ್ಷರ ದಾಸೋಹ ಯೋಜನೆ ಎಡಿ ಜಾಫರ್ ಷರೀಫ್ ಗುರುವಾರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಪಾಲಕರ ಅಹವಾಲು ಆಲಿಸಿದರು. ಮುಖ್ಯಗುರು ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಘಟನೆ ಮರುಕಳಿಸಿದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಗುರಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net