ಸಂಸತ್‌ನಲ್ಲಿ ನಾರಿಶಕ್ತಿ ಪ್ರಭಾವ

ಹೇಮಲತಾ ನಾಯಕ
ಹೇಮಲತಾ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್‌
ಬಳ್ಳಾರಿ : 2029ರ ಲೋಕಸಭಾ ಚುನಾವಣೆಯೊಳಗೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಯಾಗಿ, ನಾರಿಯರು ಸಂಸತ್‌ನಲ್ಲಿ ಶಕ್ತಿಯುತವಾಗಿ ಪ್ರತಿನಿಧಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಿಳಾ ಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಇತಿಹಾಸತ್ಮಕ ಬೆಳವಣಿಗೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಹಲವು ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಸ್ತಾಪವಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಇದನ್ನು ಜಾರಿಗೆ ತರುವ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ 2029ರೊಳಗೆ ಮಹಿಳೆಯರಿಗೆ ಶೇ 33ರಷ್ಟು ಪ್ರತಿನಿಧಿತ್ವ ದೊರೆಯುವುದು ಖಚಿತ ಎಂದು ಹೇಳಿದರು.
ಕೆಲ ವರ್ಷಗಳ ಹಿಂದೆ ಸಂಸತ್ತಿನಲ್ಲಿ ಮಹಿಳಾ ಸದಸ್ಯರ ಪ್ರಮಾಣ ಕೇವಲ ಶೇ. 4ರಷ್ಟಿತ್ತು. ಮಾಜಿ ಸಂಸದರಾದ ಬಸವರಾಜೇಶ್ವರಿ, ನಾಗಮ್ಮ ಕೇಶವಮೂರ್ತಿ ಮೊದಲಾದ ನಾಯಕರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 2019ರ ವೇಳೆಗೆ ಮಹಿಳಾ ಸದಸ್ಯರ ಪ್ರಮಾಣ ಶೇ. 15ರಷ್ಟು ಏರಿಕೆಯಾಗಿದೆ ಎಂದರು.
ಮಹಿಳಾ ಮೀಸಲಾತಿ ವಿಚಾರಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳ ಆಕ್ಷೇಪಗಳ ನಡುವೆಯೂ ಎನ್‌ಡಿಎ ಸರ್ಕಾರ ಇದನ್ನು ಜಾರಿಗೆ ತರುವ ಬದ್ಧತೆಯಿದೆ. 2029ರ ಚುನಾವಣೆಯ ವೇಳೆಗೆ ಮಹಿಳೆಯರು ತಮ್ಮ ಹಕ್ಕಿನ ಮೀಸಲಾತಿ ಅನುಭವಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹಂಪಿ ರಮಣ, ಪದಾಧಿಕಾರಿಗಳಾದ ಡಾ. ಸುಧಾ, ವಿಜಯಲಕ್ಷ್ಮೀ, ಡಾ. ಅರುಣಾ ಕಾಮಿನೇನಿ, ಡಾ. ರೇಣುಕಾ ಮಂಜುನಾಥ, ಅಲುವೇಲು, ಸಾಧನಾ ಹಿರೇಮಠ ಇತರರಿದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net