ಅನುದಾನಕ್ಕಾಗಿ ಕಾಯುತ್ತಿರುವ ಮಹಿಳಾ ಕಾಲೇಜು

ಬಳ್ಳಾರಿಯ ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೊರನೋಟ.
ಬಳ್ಳಾರಿಯ ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿಪೂಜೆಗೆ ಸೀಮಿತಗೊಂಡ ಕಟ್ಟಡ ಕಾಮಗಾರಿ
  • ಕೊಠಡಿ ಕೊರತೆಯಿಂದ ವಿದ್ಯಾರ್ಥಿನಿಯರಿಗೆ ತೊಂದರೆ

ಬಳ್ಳಾರಿ:

ನಗರದಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊರತೆಯಿಂದ ಕಳೆದ ಎರಡು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ 2014ರಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಯಿತು. ಬಳಿಕ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರೇಡಿಯೋ ಪಾರ್ಕ್ ಬಳಿಯ ಡಯಟ್ ಕಾಲೇಜು ಕಟ್ಟಡಕ್ಕೆ ಮಹಿಳಾ ಕಾಲೇಜು ಸ್ಥಳಾಂತರಿಸಲಾಯಿತು. ಸುಸಜ್ಜಿತ ಸ್ವಂತ ಕಟ್ಟಡ ಕೊರತೆಯಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರುವುದ ಸಾಮಾನ್ಯವಾಗಿದ್ದು ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ಹೈರಾಣಾಗಿದ್ದಾರೆ.
ಈ ಕಾಲೇಜು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಟ್ಟಿದೆ. ಬಿಎ, ಬಿ.ಕಾಂ. ಕೋರ್ಸ್ ಒಳಗೊಂಡಿದೆ. ಕಳೆದ ವರ್ಷ 351 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತಕ ಸಾಲಿನಲ್ಲಿ ಬಿಎಸ್ಸಿ ಸೇರಿದಂತೆ ಕೆಲ ಹೊಸ ಕೋರ್ಸ್‌ಗಳ ಆರಂಭಗೊಂಡಿರುವುದರಿಂದ ವಿದ್ಯಾರ್ಥಿನಿಯರ ಸಂಖ್ಯೆ 461ಕ್ಕೆ ಹೆಚ್ಚಿದೆ. ಐವರು ಕಾಯಂ ಪ್ರಾಧ್ಯಾಪಕರು, 15 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ವರ್ಷದಿಂದ ವರ್ಷಕ್ಕೆ ಕಾಲೇಜು ದಾಖಲಾತಿ ಹೆಚ್ಚಿಸಲು ಸಿಬ್ಬಂದಿ ಸಕ್ರಿಯರಾಗಿದ್ದಾರೆ.
ಜಿಲ್ಲೆ ಸೇರಿದಂತೆ ನಗರದಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಪ್ರತಿಷ್ಟಿತ ಖಾಸಗಿ ಕಾಲೇಜುಗಳಿವೆ. ಇವು ದಾಖಲಾತಿ ಹೆಚ್ಚಿಸಿಕೊಳ್ಳಲು ಪೈಪೋಟಿಗೆ ಇಳಿದಿವೆ. ಆದರೆ, ಸೌಲಭ್ಯ ಕೊರತೆ ನಡುವೆಯೂ ಒಂದೇ ವರ್ಷದಲ್ಲೇ 110 ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿಸಿಕೊಂಡಿರುವುದು ಗಮರ್ನಾಹ ಸಾಧನೆಯಾಗಿದೆ. ಸದ್ಯ, ಕಾಲೇಜು ಕಟ್ಟಡದಲ್ಲಿ ಆರು ಕೊಠಡಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚವಾಗಿರುವುದರಿಂದ ಆವರಣದಲ್ಲಿರುವ ಶಾಲೆಯ ನಾಲ್ಕು ಕೊಠಡಿಗಳಲ್ಲಿ ಬೋಧಿಸಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿನಿಯರ ಮೆಚ್ಚುಗೆ ಕಾಲೇಜು ಇದಾಗಿದೆ.
ಅನುಮೋದನೆ ದೊರೆತಿಲ್ಲ:
2024ರಲ್ಲಿ ಜಿಲ್ಲಾ ಕ್ರೀಡಾಂಗಣ ಬಳಿಯ 2.80 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಶಾಸಕ ಬಿ.ನಾಗೇಂದ್ರ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದಾಗ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ವಿಶೇಷ ಅನುದಾನದಡಿ 25 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಆದರೆ, ಭೂಮಿಪೂಜೆ ನೆರವೇರಿದ ಕೆಲ ತಿಂಗಳಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನಕ್ಕೆ ಅನುಮೋದನೆ ದೊರೆಯಲಿಲ್ಲ. ನಂತರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಸಚಿವ ಜಮೀರ್ ಅಹ್ಮದ್ ಖಾನ್, ಅನುದಾನದ ಬಿಡುಗಡೆಗೆ ಆಸಕ್ತಿ ವಹಿಸಲಿಲ್ಲ. ಇದೀಗ ಬಿ.ನಾಗೇಂದ್ರ ಅವರೇ ಮತ್ತೆ ಸಚಿವರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಅನುದಾನಕ್ಕೆ ಅನುಮೋದನೆ ನೀಡಿದರೆ ನೂರರು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ.

ದಾಖಲಾತಿ ಹೆಚ್ಚಳಕ್ಕೆ ಶ್ರಮ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ ಹತ್ತಕ್ಕೂ ಅಧಿಕ ವರ್ಷ ಕಳೆದಿದೆ. ಕಾಲೇಜಿನ ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ರಜಾ ದಿನಗಳಲ್ಲಿ ವಾಹನ ಬಾಡಿಗೆ ಪಡೆದು ಮೈಕ್ ಅಳವಡಿಸಿಕೊಂಡು ಸಮೀಪದ ಗ್ರಾಮಗಳಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಪಾಲಕರು ಹಾಗೂ ವಿದ್ಯಾರ್ಥಿಗಳ ಮನವರಿಕೆ ಮಾಡುತ್ತಾರೆ. ಈ ಶ್ರಮದಿಂದಲೇ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಸ್ವಂತ ಕಟ್ಟಡ ಹಾಗೂ ಅತ್ಯಾಧುನಿಕ ಸೌಲಭ್ಯ ಒದಗಿಸದರೆ ಈ ಸಂಖ್ಯೆ ಮತ್ತು ಮತ್ತಷ್ಟು ಹೆಚ್ಚಳವಾಗಲಿದೆ.
"

ಈಗಾಗಲೇ ಕಾಲೇಜು ಸಿಬ್ಬಂದಿ ಸಚಿವ ಬಿ.ನಾಗೇಂದ್ರ ಅವರನ್ನು ಭೇಟಿಯಾಗಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರು, ಕೆಲ ದಿನಗಳಲ್ಲೇ ಅನುದಾನಕ್ಕೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.

— ಡಾ.ಕೆ.ಪ್ರಜ್ಞಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net