ಬಳ್ಳಾರಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಉಚಿತ ಮಹಿಳಾ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರವನ್ನು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ಜಿಲ್ಲಾ ಲೀಡ್ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ, ನಿರ್ದೇಶಕ ಬಿ. ವಿನಯ್ ಕುಮಾರ್, ಶಾಖೆ ವ್ಯವಸ್ಥಾಪಕ ಜಯಕೃಷ್ಣ ಇತರರಿದ್ದರು.
ಬಳ್ಳಾರಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು, ಆಸಕ್ತಿಯಿಂದ ಕೌಶಲ ಕಲಿತು ಸಮಾಜದ ಮುಂಚೂಣಿಗೆ ಬರಬೇಕು ಎಂದು ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಹೇಳಿದರು.
ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಆಯೋಜಿಸಿದ್ದ 35 ದಿನಗಳ ಉಚಿತ ಮಹಿಳಾ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೌಶಲಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣಬೇಕು ಮತ್ತು ತನ್ಮೂಲಕ ಸ್ವಂತ ಕಾಲಿನ ಮೇಲೆ ನಿಂತು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ಮಹಿಳಾ ಉದ್ಯಮಿಗಳಿಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.