ಬುಡಾದಲ್ಲಿ ವ್ಯಾಪಕ ಭ್ರಷ್ಟಾಚರ

ವೀರೇಶ್
ವೀರೇಶ್
Published on

ಪ್ರಮುಖ ಮುಖ್ಯಾಂಶಗಳು

  • ವಿಲೇವಾರಿಗಾಗಿ ಅಧಿಕಾರಿಗಳು ಲಂಚ
  • ಭ್ರಷ್ಟಾಚಾರದಿಂದ ಉದ್ಯಮಿಗಳು ತೀವ್ರ ಸಂಕಷ್ಟ
ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಕಚೇರಿಯಲ್ಲಿ ಭ್ರಷ್ಟಾಚಾರ ಮುಂದುವರಿದಿದ್ದು, ಬಡಾವಣೆ ಅನುಮೋದನೆ ಸೇರಿದಂತೆ ನಾನಾ ಕಡತಗಳ ವಿಲೇವಾರಿಗಾಗಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ವೀರೇಶ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಇಪ್ಪತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ನಾನಾ ಇಲಾಖೆಗಳಲ್ಲಿನ ಭ್ರಷ್ಟಾಚಾರದಿಂದ ಉದ್ಯಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಿದರು. ಒಂದು ಎಕರೆ ಜಮೀನಿನ ಲೇಔಟ್ ಅನುಮೋದನೆಗೆ ಸರ್ಕಾರದ ಅಧಿಕೃತ ಶುಲ್ಕ 8ರಿಂದ 9 ಲಕ್ಷ ರೂ. ಇದ್ದರೂ, ಇಲಾಖೆಗಳ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ 15ರಿಂದ 16 ಲಕ್ಷ ರೂ. ವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ 2 ಎಕರೆ 34 ಸೆಂಟ್ಸ್ ಜಮೀನಿನ ಮೂರು ಬಡಾವಣೆಯ ಕಡತಗಳಿಗೆ ಅನುಮೋದನೆ ನೀಡಲು ಬುಡಾ ಸರ್ವೇಯರ್ ಶಾಂತಮೂರ್ತಿ 3.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಲ್ಲಿಸಿದ ದೂರಿನ ಮೇರೆಗೆ ಜೂ. 19ರಂದು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಧ್ಯವರ್ತಿ ಮೂಲಕ ಹಣ ಪಡೆಯುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ ಎಂದರು.
ರಾಜ್ಯ ಸರ್ಕಾರ ಜೀರೋ ಕರಪ್ಷನ್ ಆಡಳಿತದ ಭರವಸೆ ನೀಡಿದ್ದರೂ ನೆಲಮಟ್ಟದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಅನೇಕ ಉದ್ಯಮಿಗಳು ಸಮಸ್ಯೆ ಅನುಭವಿಸುತ್ತಿದ್ದರೂ ಭಯದಿಂದ ದೂರು ನೀಡುತ್ತಿಲ್ಲ. ಅಧಿಕಾರಿಗಳಿಂದ ಪ್ರತೀಕಾರದ ಕ್ರಮ ಎದುರಾದರೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ನಿಲ್ಲಿಸುವುದಿಲ್ಲ, ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net