ಯಾರಾಗುವರು ಪಾಲಿಕೆ ಮಹಾಪೌರ?

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಹಾಲಿ ಮೇಯರ್ ಪಿ.ಗಾದೆಪ್ಪ ಹಾಗೂ ಉಪ ಮೇಯರ್ ಡಿ. ಸುಕುಂ ಅವರ ಒಂದು ವರ್ಷದ ಅಧಿಕಾರವಧಿ ಮುಕ್ತಾಯದ ಬೆನ್ನಲ್ಲೇ, ಮುಂದಿನ ಅವಧಿಯ ಆಯ್ಕೆಗೆ ನ.13ರಂದು ಚುನಾವಣೆ ನಡೆಸಲು ಕಲಬುರಗಿ ಪ್ರಾದೇಶಿಕ ಆಯುಕ್ತರು ಈಚೆಗೆ ಆದೇಶ ಹೊರಡಿಸಿದ್ದಾರೆ.
of the Ballari City Corporation office
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯ ಹೊರನೋಟ.
Published on: 

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಹಾಲಿ ಮೇಯರ್ ಪಿ.ಗಾದೆಪ್ಪ ಹಾಗೂ ಉಪ ಮೇಯರ್ ಡಿ. ಸುಕುಂ ಅವರ ಒಂದು ವರ್ಷದ ಅಧಿಕಾರವಧಿ ಮುಕ್ತಾಯದ ಬೆನ್ನಲ್ಲೇ, ಮುಂದಿನ ಅವಧಿಯ ಆಯ್ಕೆಗೆ ನ.13ರಂದು ಚುನಾವಣೆ ನಡೆಸಲು ಕಲಬುರಗಿ ಪ್ರಾದೇಶಿಕ ಆಯುಕ್ತರು ಈಚೆಗೆ ಆದೇಶ ಹೊರಡಿಸಿದ್ದಾರೆ.

ಪಾಲಿಕೆಯ 39 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 21, ಬಿಜೆಪಿ 13 ಹಾಗೂ ಪಕ್ಷೇತರ ಐದು ಸದಸ್ಯರು ಆಯ್ಕೆಯಾಗಿದ್ದರು. ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಒಟ್ಟು 26 ಸ್ಥಾನ ಹೊಂದುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. ಒಟ್ಟು ಐದು ವರ್ಷದ ಅವಧಿಯ ಪಾಲಿಕೆಯ ಅಧಿಕಾರವನ್ನು ಕಾಂಗ್ರೆಸ್ ಒಪ್ಪಂದದಂತೆ ಪ್ರತಿ ವರ್ಷ ಅಧಿಕಾರ ಹಂಚಿಕೆ ಮಾಡುವ ಮೂಲಕ ಪಕ್ಷದವರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ. ಅದರಂತೆ, ಈ ಬಾರಿ ಮೇಯರ್-ಉಪ ಮೇಯರ್ ಗಾದಿ ಏರಲಿರುವವರಿಗೆ ಸಿಗುವುದು ನಾಲ್ಕು ತಿಂಗಳ ಅಧಿಕಾರವಧಿ ಮಾತ್ರ!. ಹೀಗಾಗಿ ಈ ಚುನಾವಣೆಯತ್ತ ಪಾಲಿಕೆ ಸದಸ್ಯರಲ್ಲಿ ಕುತೂಹಲ ಹೆಚ್ಚಿದೆ.

ಯಾರ ಅಧಿಕಾರ ಎಷ್ಟೆಷ್ಟು?

ಪಾಲಿಕೆಯ ನಾಲ್ಕೂವರೆ ವರ್ಷದ ಅಧಿಕಾರವಧಿಯಲ್ಲಿ ಮೇಯರ್ ಆದವರಲ್ಲಿ ಮಹಿಳೆಯರೇ ಪಾರುಪತ್ಯ ಸಾಧಿಸಿದ್ದಾರೆ. ಮೊದಲ ಬಾರಿಗೆ ಮೇಯರ್ ಆಗಿ ರಾಜೇಶ್ವರಿ ಸುಬ್ಬರಾಯಡು ಅಧಿಕಾರ ಸ್ವೀಕಾರ ಮಾಡಿದರು. ನಂತರ, ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆ ಪಾತ್ರರಾದ ತ್ರಿವೇಣಿ ಅವರು ಏಳು ತಿಂಗಳವರೆಗೆ ಜವಾಬ್ದಾರಿ ವಹಿಸಿಕೊಂಡಿದ್ದರು. ತದನಂತರ ಬಿ.ಶ್ವೇತಾ ಅವರು ತಿಂಗಳು ಅಧಿಕಾರ ಚಲಾಯಿಸಿದರು. ಇವರ ಬಳಿಕ ಮುಲ್ಲಂಗಿ ನಂದೀಶ್ ಅವರು ಒಂದು ವರ್ಷ ಅಧಿಕಾರ ಚಲಾಯಿಸಿದರು. ನಂತರ ದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಪಾಲಿಕೆ ಸದಸ್ಯ ಪಿ.ಗಾದೆಪ್ಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯದ ಗಮನಸೆಳೆದಿದ್ದರು. ಸದ್ಯ, ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ (ಮಹಿಳೆ), ಉಪ ಮೇಯರ್ ಸ್ಥಾನ (ಸಾಮಾನ್ಯ ವರ್ಗ)ಕ್ಕೆ ಮೀಸಲಾಗಿದೆ. ಅಲ್ಪಾವಧಿ ಅಧಿಕಾರವಾದರೂ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳು ಪಾಲಿಕೆ ಆಡಳಿತದಲ್ಲಿ ಮಹತ್ವ ಪಡೆದಿರುವುದರಿಂದ, ಕೊನೆಯ ಕ್ಷಣದ ರಾಜಕೀಯ ಬೆಳವಣಿಗೆಗಳು ಯಾರ ಪರವಾಗಿ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ನಾಲ್ಕು ತಿಂಗಳ ಆಡಳಿತದ ಚುಕ್ಕಾಣಿ ಹಿಡಿಯುವ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದಕ್ಕೆ ಉತ್ತರ ನ.13ಕ್ಕೆ ದೊರೆಯಲಿದೆ.

ಪ್ರತಿ ಬಾರಿಯೂ ಹಗ್ಗಜಗ್ಗಾಟ

ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ವೇಳೆ ಪ್ರತಿ ಬಾರಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಸದಸ್ಯರ ಮಧ್ಯೆ ಒಮ್ಮತ ಮೂಡದ ಕಾರಣ ಪೈಪೋಟಿ ಏರ್ಪಡುತ್ತಿದೆ. ಎರಡನೇ ಅವಧಿ ಮೇಯರ್ ಆಯ್ಕೆ ವೇಳೆಯೂ ಒಮ್ಮತ ಮೂಡದೆ ಎರಡು ಬಾರಿ ಚುನಾವಣೆ ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತರೆಡ್ಡಿ ಹಾಗೂ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೊನೆಗೆ ನಾಗೇಂದ್ರ ಬೆಂಬಲಿತ ಶ್ವೇತಾ ಬಿ. ಅವರನ್ನು ಆಯ್ಕೆ ಮಾಡಲಾಯಿತು. ಮೂರನೇ ಅವಧಿಗೆ ಸಾಮಾನ್ಯಕ್ಕೆ ಮೀಸಲಾಗಿದ್ದಾಗಲೂ ಸದಸ್ಯ ಎಂ.ಪ್ರಭಂಜನ್ ಹಾಗೂ ಎಂ.ನಂದೀಶ್ ನಡುವೆ ಪೈಪೋಟಿ ನಡೆದಿತ್ತು. ಇದರಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರಿಗೊಬ್ಬರಿಗೆ ಪರೋಕ್ಷವಾಗಿ ಬೆಂಬಲಿಸಿದ್ದರು. ಕೊನೆಗೂ ರಾಜ್ಯ ಹಾಗೂ ಸ್ಥಳೀಯರ ಮನವೊಲಿಕೆ ಪರಿಣಾಮ ನಂದೀಶ್ ಮೇಯರ್ ಆದರು. ನಂತರ ಹಾಲಿ ಮೇಯರ್ ಪಿ.ಗಾದೆಪ್ಪ ಆಯ್ಕೆ ಮಾಡುವ ವೇಳೆ ಮತ್ತೋಮ್ಮೆ ಪ್ರಭಂಜನ್ ಕುಮಾರ್ ತ್ರೀವ್ರ ಪೈಪೋಟಿ ನಡೆಸಿದ ಪರಿಣಾಮ ಸ್ವತಃ ಎಐಸಿಸಿ ಕಾರ್ಯದರ್ಶಿ ಡಾ.ಸೈಯದ್ ನಾಸೀರ್ ಹುಸೇನ್ ಬಂದು ಮನವೊಲಿಸಿದ ಪ್ರಸಂಗ ನಡೆಯಿತು. ಸದ್ಯ, ಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಪರಿಶಿಷ್ಟ ಪಂಗಡ (ಎಸ್‌ಟಿ)ದ ಪಿ.ಶಶಿಕಲಾ ಜಗನ್ನಾಥ್ ಅವರ ಹೆಸರು ಪ್ರಬಲ ಕೇಳಿ ಬರುತ್ತಿದ್ದು, ಕೊನೆಯ ಕ್ಷಣದವರೆಗೆ ಕಾದು ನೋಡಬೇಕಿದೆ. ಸದ್ಯ, ಬಿಜೆಪಿ ಸಂಖ್ಯಾಬಲ ಕಡಿಮೆ ಇರುವುದರಿಂದ ಸ್ಪರ್ಧೆಗೆ ಮಾತ್ರ ಸೀಮಿತವಾಗಿದೆ.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದ್ದರಿಂದ, ಈ ಬಾರಿ ಸ್ಪರ್ಧೆಗೆ ಅವಕಾಶವಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುವೆ.
ಎಂ.ಪ್ರಭಂಜನ್ ಕುಮಾರ್ ಪಾಲಿಕೆ ಸದಸ್ಯ, ಬಳ್ಳಾರಿ