ದಾರಿ ಯಾವುದಯ್ಯ ಪಾದಚಾರಿಗೆ ?

ದಾರಿ ಯಾವುದಯ್ಯ ಪಾದಚಾರಿಗೆ
ದಾರಿ ಯಾವುದಯ್ಯ ಪಾದಚಾರಿಗೆ
Published on

ಪ್ರಮುಖ ಮುಖ್ಯಾಂಶಗಳು

  • ಪಾದಚಾರಿ ಮಾರ್ಗ ನಾಪತ್ತೆ
  • ನಡೆಯುವುದೇ ಒತ್ತುವರಿ ತೆರವು
ಬಳ್ಳಾರಿ : ನಗರದ ಬಹುತೇಕ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳು ನಾಪತ್ತೆಯಾಗಿವೆ. ಹೀಗಾಗಿ, ಪಾದಚಾರಿಗಳು ನಡೆದಾಡಲು ದಾರಿ ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಮಹಾನಗರಪಾಲಿಕೆಯಿಂದ ನಿರ್ಮಿಸಿದ್ದರೂ ಅವು ಸಾರ್ವಜನಿಕರಿಗೆ ಲಭ್ಯವಾಗುವ ಸ್ಥಿತಿಯಲ್ಲಿ ಇಲ್ಲ.
ಪುಟ್‌ಪಾತ್‌ಗಳು ತರಕಾರಿ, ಹೂವು, ಹಣ್ಣು, ವ್ಯಾಪಾರ ವಹಿವಾಟು ಕೇಂದ್ರಗಳಾಗಿವೆ. ಕೆಲವಡೆ ಪಾರ್ಕಿಂಗ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಇನ್ನೂ ಕೆಲವಡೆ ಅಂಗಡಿ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದಾರೆ. ಪೊಲೀಸರಂತೂ ಪಾದಚಾರಿ ಮಾರ್ಗಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಾರೆ. ಕೇಳಿದರೆ ಮಹಾನಗರ ಪಾಲಿಕೆ ಮೇಲೆ ಎತ್ತಿ ಹಾಕುತ್ತಾರೆ. ಇನ್ನೂ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ನಾಗರಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿನೇದಿನೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸುತ್ತಿದೆ. ಕೆಲ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಇದರ ಜತೆಗೆ ಪಾದಚಾರಿ ಮಾರ್ಗದ ಒತ್ತುವರಿ ಆಗಿ ಜನರು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನೆಲೆಸಿದೆ. ಏಕಮುಖ ಸಂಚಾರ ಉಲ್ಲಂಘನೆ, ನಿಗದಿತ ಸ್ಥಳದಲ್ಲಿ ವಾಹನಗಳ ನಿಲುಗಡೆ ಮಾಡದಿರುವುದು ಕೂಡ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.
ಈಗಾಗಲೇ ಬೆಂಗಳೂರು ಸೇರಿದಂತೆ ಹಲವಡೆ ಪುಟಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಜೋರಾಗಿದೆ. ಆದರೆ, ಬಳ್ಳಾರಿ ನಗರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಪಾದಚಾರಿಗಳು ಮಾತ್ರ ಗೊಣಗುತ್ತಲೇ ಇದ್ದಾರೆ. ತಮ್ಮ ದಾರಿಯನ್ನು ಯಾರು ಹುಡುಕಿ ಕೊಡುತ್ತಾರೆ ಎಂಬುದಾಗಿ ಕೇಳುತ್ತಿದ್ದಾರೆ.
ನಗರದ ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ, ಸಿನಿಮಾ ಮಂದಿರ, ಹೊಟೇಲ್ ಹಾಗೂ ವಾಣಿಜ್ಯ ಮಳಿಗೆಗಳು ಇರುವುದರಿಂದ ಸದಾ ಜನಬೀಡು ಪ್ರದೇಶವಾಗಿದೆ. ಆದರೆ, ಎರಡು ಬದಿಯಲ್ಲಿ ಪಾಲಿಕೆಯಿಂದ ಪುಟ್‌ಪಾತ್ ನಿರ್ಮಿಸಿದರೂ ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಧ್ಯೆ ಓಡಾಡಬೇಕಾದ ಪರಿಸ್ಥಿತಿಯಾಗಿದೆ.
ಅಲ್ಲದೆ, ಈ ರಸ್ತೆಯಲ್ಲೇ ಸಮ - ಬೆಸ ಪಾರ್ಕಿಂಗ್ ಜಾರಿ ಮಾಡಿರುವುದರಿಂದ ವಾಹನಗಳ ಸಂಚಾರಕ್ಕೆ ಕಿರಿದಾಗಿದೆ. ಕೆಸಿ ರಸ್ತೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಳಿಗೆಗಳಿದ್ದು, ಪುಟಪಾತ್ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಗವಿಯಪ್ಪ ವೃತ್ತದಿಂದ ಎಪಿಎಂಸಿ ವರಗೆ ಪುಟ್‌ಪಾತ್‌ಯಿದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ಇನ್ನೂ ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಐಷಾರಾಮಿ ಮಳಿಗೆಗಳಿದ್ದು, ಸಂಪೂರ್ಣವಾಗಿ ಸುಧಾ ಕ್ರಾಸ್‌ನ ಎಸ್ಪಿ ವೃತ್ತದವರೆಗೆ ಕಂಪನಿಗಳ ಬ್ರಾಂಡ್‌ಗಳು ರಾರಾಜಿಸುವುದರಿಂದ ಪುಟ್‌ಪಾತ ಕಾಣದಾಗಿದೆ.
ಅದರಂತೆ ಸಂಗಮ್ ವೃತ್ತದಿಂದ ಎಂಜಿವರೆಗೆ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾಸ್ಥರು, ಹಣ್ಣಿನ ಅಂಗಡಿಗಳು ಹಾಕಿರುವುದರಿಂದ ಪುಟಪಾತ್ ಮಾಯವಾಗಿದೆ. ಗಡಿಗೆ ಚನ್ನಪ್ಪ ವೃತ್ತದಿಂದ ಎಸ್ಪಿ ಸರ್ಕಲ್‌ವರೆಗೆ ಪುಟ್‌ಪಾತ್ ಇರುವುದೇ ಕಾಣಿಸಲ್ಲ. ನಗರದ ಬಹುತೇಕ ಕಡೆ ಫುಟ್‌ಪಾತ್ ಇಲ್ಲದಿರುವ ಕಾರಣ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿದೆ.
ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ ಪ್ರೀತಿ ಗೆಹ್ಲೋಟ್ ಅವರು ಒತ್ತುವರಿಗೆ ತೆರವು ಮುಂದಾದ ವೇಳೆ ಮಳಿಗೆಗಳ ಮಾಲೀಕರು ರಾಜಕೀಯ ಪ್ರಾಬಲ್ಯ ಬೆಳೆಸಿ ಅವರನ್ನು ವರ್ಗಾಯಿಸಿದರು. ತದನಂತರ ಹಲವರು ಆಯುಕ್ತರು ಬದಲಾವಣೆಗೊಂಡರೂ ಒತ್ತುವರಿ ತೆರವಿಗೆ ಮುಂದಾಗಿಲ್ಲ. ಇನ್ನೂ ಪಾಲಿಕೆ ಸದಸ್ಯರೂ ತಲೆಕೆಡಿಸಿಕೊಂಡಿಲ್ಲ. ಈ ಭಾಗದಲ್ಲಿ ನಿತ್ಯ ತಿರುಗಾಡುವ ನಾಗರಿಕರ ಪರಿಸ್ಥಿತಿ ಮಾತ್ರ ಅಧೋಗತಿ.
ಹಲವಡೆ ಸಂಜೆ ಆಗುತ್ತಲ್ಲೇ ಪಾದಚಾರಿ ಮಾರ್ಗವನ್ನು ಟಾರ್ಚ್ ಹಾಕಿಕೊಂಡು ಹುಡುಕಬೇಕು. ವೃದ್ಧರು, ವಿಶೇಷ ಚೇತನರು, ಮಹಿಳೆಯರು , ಮಕ್ಕಳು ಈ ಮಾರ್ಗದಲ್ಲೇ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇನ್ನೂ ಕೆಲವಡೆ ಪಾದಚಾರಿ ಮಾರ್ಗದ ಚಪ್ಪಡಿಗಳು ಮೇಲೆದ್ದು ಬಂದಿವೆ. ಆಚೆ ಈಚೆ ನೋಡಿಕೊಂಡು ಕಾಲಿಟ್ಟರೆ ಕಥೆ ಮುಗಿಯಿತು. ನಗರದ ಬಹುತೇಕ ರಸ್ತೆಗಳಲ್ಲಿ ಪುಟ್‌ಪಾತ್ ನಿರ್ಮಾಣವಾಗಿವೆ. ಆದರೆ, ಒತ್ತುವರಿಯಾದ ಪಾದಚಾರಿ ರಸ್ತೆಯನ್ನು ತೆರವುಗೊಳಿಸಲು ಯಾರು ಮುಂದಾಗುತ್ತಿಲ್ಲ.
"

ಕೋಟ್... ನಗರದಲ್ಲಿ ಒತ್ತುವರಿಯಾದ ಪುಟ್‌ಪಾತ್ ತೆರವುಗೊಳಿಸಲು ಈಗಾಗಲೇ ಟ್ರಾಫಿಕ್ ಪೊಲೀಸರ ಜತೆ ಚರ್ಚಿಸಲಾಗಿದೆ. ಸದ್ಯ, ಎಸ್‌ಐಆರ್ ಪ್ರಕ್ರಿಯಯೆಲ್ಲಿ ಪಾಲಿಕೆ ಇಂಜನಿಯರ್, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಎಸ್‌ಐಆರ್ ಮುಗಿದ ಕೂಡಲೇ ತೆರವುಗೊಳಿಸಲಾಗುವುದು.- ಪಿ.ಎಸ್.ಮಂಜುನಾಥ, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net