ಬಳ್ಳಾರಿಯ ಎಸ್ಪಿ ಕಚೇರಿ ಆವರಣದಲ್ಲಿ ಹೆಲ್ಮೆಟ್ ಜಾಗೃತಿ ಅಂಗವಾಗಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಡಿಸಿ ನಾಗೇಂದ್ರ ಪ್ರಸಾದ್ ಕೆ., ಚಾಲನೆ ನೀಡಿದರು. ನ್ಯಾ.ರಾಜೇಶ್ ಎನ್.ಹೊಸಮನೆ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಎಎಸ್ಪಿ ನವೀನ್ ಕುಮಾರ್ ಇದ್ದರು.
ಬಳ್ಳಾರಿ : ನಾಗರಿಕರ ಪ್ರಾಣ ರಕ್ಷಣೆಯು ಕಾನೂನಿನ ಮುಖ್ಯ ಉದ್ದೇಶವಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಎಸ್ಪಿ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ, ಹೆಲ್ಮೆಟ್ ವಿತರಣೆ ಹಾಗೂ ಬೈಕ್ ರ‌್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಜೂ.1ರಿಂದ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಜನರು ಈಗಾಗಲೇ ಸಕಾಲ ಸೇವೆ ಮತ್ತು ಜನಗಣತಿ ಕಾರ್ಯಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನ ಪಡೆದು ತಮ್ಮ ಇಚ್ಛಾಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಅದೇ ರೀತಿ ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಮೂಲಕ ಜಿಲ್ಲೆಯ ಹೆಸರು ಎತ್ತಿಹಿಡಿಯಬೇಕು ಎಂದರು.
ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಸಂಚಾರ ನಿಯಮಗಳನ್ನು ಕೇವಲ ದಂಡ ಅಥವಾ ಪೊಲೀಸರ ಭಯಕ್ಕಾಗಿ ಪಾಲಿಸಬಾರದು. ನಮ್ಮ ಶಿರ (ತಲೆ) ಸುರಕ್ಷಿತವಾಗಿದ್ದರೆ ಮಾತ್ರ ದೇಹಕ್ಕೆ ಚೈತನ್ಯವಿರುತ್ತದೆ ಎಂಬುದು ಪ್ರತಿಯೊಬ್ಬರ ಮನವರಿಕೆಯಾಗಬೇಕು. ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲು ಯಾವುದೇ ಜಿಲ್ಲೆಗಳಿಗೂ ಅವಕಾಶವಿಲ್ಲ ಎಂದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬೈಕ್ ಅಪಘಾತಗಳಿಂದಾಗಿ ಒಟ್ಟು 462 ಸವಾರರು ಮೃತಪಟ್ಟಿದ್ದಾರೆ. ಜಿಲ್ಲಾದ್ಯಂತ ಸರಾಸರಿ ಪ್ರತಿ ಎರಡು ದಿನಕ್ಕೆ ಒಂದು ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ. ಅಂದರೆ ವರ್ಷಕ್ಕೆ ಸುಮಾರು 150ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ವಿವರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರು ತಾವು ಬಳಸುವ ಬೆಲೆಬಾಳುವ ಮೊಬೈಲ್ ಫೋನ್‌ಗಳಿಗೆ ನೀಡುವಷ್ಟೂ ಸುರಕ್ಷತೆ ತಮ್ಮ ಜೀವಕ್ಕೆ ನೀಡುತ್ತಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಸೆಖೆ ಅಥವಾ ಅಸ್ವಸ್ಥತೆಯ ಕಾರಣ ನೀಡಿ ಹೆಲ್ಮೆಟ್ ಧರಿಸುವುದನ್ನು ಕಡೆಗಣಿಸಬಾರದು. ಸ್ವಲ್ಪ ಸಮಯದ ಅನಾನುಕೂಲಕ್ಕಿಂತ ಪ್ರಾಣ ರಕ್ಷಣೆ ಮುಖ್ಯ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸಿ- ಜೀವ ಉಳಿಸಿ ಎಂಬ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿದರು. ತದನಂತರ ಪೌರಕಾರ್ಮಿಕರಿಗೆ, ಸಾರ್ವಜನಿಕರು ಒಳಗೊಂಡಂತೆ 100 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಹೆಲ್ಮೆಟ್ ಜಾಗೃತಿ ಅಂಗವಾಗಿ ನಗರದಲ್ಲಿ ಆಕರ್ಷಕ ಬೈಕ್ ರ‌್ಯಾಲಿ ನಡೆಯಿತು. ಡಿಸಿ ನಾಗೇಂದ್ರ ಪ್ರಸಾದ್ ಕೆ., ಅವರು ಜಾಗೃತಿ ಅಂಗವಾಗಿ ಸ್ವತಃ ತಾವೇ ಬೈಕ್ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.