ಬಳ್ಳಾರಿಯ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು. ಮೇಯರ್ ಪಿ.ಗಾದೆಪ್ಪ, ಡಿಸಿ ಕೆ.ನಾಗೇಂದ್ರ ಪ್ರಸಾದ್ , ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಇತರರಿದ್ದರು.
ಬಳ್ಳಾರಿ : ಬಸವಣ್ಣ ಅವರು 12ನೇ ಶತಮಾನದಲ್ಲೇ ಸಮಾನತೆ, ಏಕತೆ ಮತ್ತು ’ಕಾಯಕವೇ ಕೈಲಾಸ’ ಎಂಬ ಉದಾತ್ತ ತತ್ವಗಳನ್ನು ಸಾರಿದ ಮಹಾನ್ ಚೇತನರು ಎಂದು ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ ಹೇಳಿದರು.
ನಗರದ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದರು. ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಬಸವಣ್ಣನವರ ಹಾದಿಯಲ್ಲಿ ಸಾಗಬೇಕಿದೆ ಎಂದು ಕರೆ ನೀಡಿದರು.
ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿ, ವಿಶ್ವಗುರು, ಶ್ರೇಷ್ಠ ವಚನಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲ್ಪಟ್ಟಿರುವ ಬಸವಣ್ಣ ಅವರ ಜಯಂತಿ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಎಲ್ಲರನ್ನೂ ಒಂದೇ ಎಂಬ ಏಕತಾ ಭಾವಕ್ಕೆ ತಂದ ಪುಣ್ಯಾತ್ಮರು ಎಂದರು. ಬಳಿಕ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಗೌರವ ನಮನ ಸಲ್ಲಿಸಲಾಯಿತು.