ವಸತಿ ಶಾಲೆಯಲ್ಲಿ ಒಂಬತ್ತು ವಿದ್ಯಾರ್ಥಿಗಳ ಪೈಕಿ ಎಂಟು ವಿದ್ಯಾರ್ಥಿಗಳು ಆಂಧ್ರ ಮೂಲದವರಾಗಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ವಿದ್ಯಾರ್ಥಿ ಮಾತ್ರ ಕನ್ನಡಿಗ ವಿದ್ಯಾರ್ಥಿಯಾಗಿದ್ದಾನೆ. ಇದನ್ನೇ ನೆಪವಾಗಿಸಿಕೊಂಡಿದ್ದ ಉಳಿದ ವಿದ್ಯಾರ್ಥಿಗಳು, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ವಿದ್ಯಾರ್ಥಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದರಂತೆ. ಹೀಯಾಳಿಸಿ ಮಾತನಾಡಿಸುವುದು, ಕೀಳಾಗಿ ನೋಡುವುದು, ಈ ವಿದ್ಯಾರ್ಥಿಯಿಂದಲೇ ಕೆಲಸ ಮಾಡಿಸುವುದು, ಕ್ರಿಕೆಟ್ ಆಡುವಾಗ ಬಾಲು, ಬ್ಯಾಟ್, ವಿಕೆಟ್ ಎಲ್ಲವನ್ನೂ ಈ ವಿದ್ಯಾರ್ಥಿಯಿಂದಲೇ ತರಿಸಲಾಗುತ್ತಿತ್ತಂತೆ. ಬ್ಯಾಟ್ ಮಾಡಲು ಒಮ್ಮೆಯೂ ಅವಕಾಶ ನೀಡುತ್ತಿರಲಿಲ್ಲ. ಒಂದು ವೇಳೆ ನೀಡಿದಾಗಲೂ ಕಿಂಡಲ್ ಮಾಡುತ್ತಿದ್ದರು. ಅಲ್ಲದೇ, ಘಟನೆ ನಡೆಯುವ ಮುನ್ನವೂ ಮಲಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ವಿದ್ಯಾರ್ಥಿ ಮುಖಕ್ಕೆ ಪೌಡರ್ ಹಚ್ಚಿ ಕೀಟಲೆ ಮಾಡಲು ಯತ್ನಿಸಿದ್ದರು. ಇದನ್ನೆಲ್ಲ ಸಹಿಸಿಕೊಂಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ವಿದ್ಯಾರ್ಥಿ, ಒಮ್ಮೆಲೆ ರೊಚ್ಚಿಗೆದ್ದು, ಕೈಗೆ ಸಿಕ್ಕ ಚೂಪಾದ ವಸ್ತುವಿನಿಂದ ಸಹಪಾಠಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದೇನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಹಲ್ಲೆ ನಡೆಸಿ ಶಾಲೆಯಿಂದ ತೆರಳಿದ ವಿದ್ಯಾರ್ಥಿ, ಬಳ್ಳಾರಿಯಿಂದ ಮೊದಲು ಅಂಜನಾದ್ರಿ ಬೆಟ್ಟಕ್ಕೆ ತೆರಳಿ, ಬಳಿಕ ಪುನಃ ವಾಪಸ್ ಬಂದಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗುತ್ತಿದೆ.