ಬಿರು ಬಿಸಿಲಲ್ಲಿ ಕಾಲೇಜಿಗೆ ಕಾಲ್ನಡಿಗೆ

ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಡೆದು ಹೋಗುತ್ತಿರುವುದು.
ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಡೆದು ಹೋಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುರುಗೋಡಿನಲ್ಲಿ ಪದವಿ ವಿದ್ಯಾರ್ಥಿಗಳಿಗಿಲ್ಲ ಸರ್ಕಾರಿ ಬಸ್ ಸೌಲಭ್ಯ
  • ಬಾದನಹಟ್ಟಿ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ವಿಜಯವಾಣಿ ಸುದ್ದಿಜಾಲ ಕುರುಗೋಡು
ಕಳೆದ ಎರಡು ದಶಕದಿಂದ ಪಟ್ಟಣದ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜಿಗೆ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಕೆಂಡದಂಥ ಸುಡು ಬಿಸಿಲಲ್ಲೂ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಕಾಲೇಜಿಗೆ ತೆರಳಬೇಕಿದೆ.
2006 ಜು.6ರಂದು ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಗಿದೆ. ಇದೇ ಮಾರ್ಗದಲ್ಲಿ ಸರ್ಕಾರಿ ಪಿಯು ಕಾಲೇಜು ಕೂಡ ಇದೆ. ಕುರುಗೋಡು, ವದ್ದಟ್ಟಿ, ಬಾದನಹಟ್ಟಿ, ಗೆಣಿಕೆಹಾಳ್, ಚಿಟಿಗಿನಹಾಳ್, ಕ್ಯಾದಿಗೆಹಾಳ್, ಸೋಮಲಾಪುರ, ಕಲ್ಲುಕಂಬ ಸೇರಿದಂತೆ ಇತರ ಗ್ರಾಮದ 1,500 ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೂ, ಕಳೆದ 20 ವರ್ಷದಿಂದ ಕಾಲೇಜಿಗೆ ಬಸ್ ವ್ಯವಸ್ಥೆ ಇಲ್ಲ.
ಇದರಿಂದಾಗಿ ವಿವಿಧ ಗ್ರಾಮಗಳಿಂದ ಬಸ್ ಮೂಲಕ ಕಂಪ್ಲಿ ರಸ್ತೆಯಲ್ಲಿನ ಹೊಸ ಹಾಗೂ ಮುಖ್ಯ ಸರ್ಕಲ್ ಬಳಿಯ ಹಳೇ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು ಅಲ್ಲಿಂದ ಸುಮಾರು 2 ಕಿ.ಮೀ. ದೂರದ ಕಾಲೇಜಿಗೆ ನಡೆದುಕೊಂಡು ಹೋಗಬೇಕಿದೆ. ತಾಲೂಕಿನಲ್ಲಿ ದಿನೇ ದಿನೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಪ್ರಸ್ತುತ ಅದರ ಪ್ರಭಾವ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ. ಸಂಜೆ 6 ಗಂಟೆಯಾದರೂ ಬಿಸಿಲು ತಗ್ಗುತ್ತಿಲ್ಲ. ಇದರಿಂದಾಗಿ ಕಾಲೇಜಿನಿಂದ ಹಿಂದಿರುಗುವಾಗಲೂ ಸುಡುವ ಬಿಸಿಲು, ಕಂಗೆಡಿಸುವ ಸೆಕೆಯಿಂದಾಗಿ ವಿದ್ಯಾರ್ಥಿಗಳು ಅಲ್ಲೊಮ್ಮೆ, ಇಲ್ಲೊಮ್ಮೆ ನಿಂತು ಕರವಸ್ತ್ರದಲ್ಲಿ ಬೆವರು ಒರೆಸುತ್ತ ನಿಲ್ಲುವ ದೃಶ್ಯ ದಾರಿ ಉದ್ದಕ್ಕೂ ಸಾಮಾನ್ಯವಾಗಿವೆ. ವಿದ್ಯಾರ್ಥಿಗಳು ಅನಾರೋಗ್ಯಕ್ಕೊಳಗಾದರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.
ಶಾಸಕರ ಭರವಸೆ ಹುಸಿ
ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಜೆ.ಎನ್.ಗಣೇಶ್‌ಗೆ ವಿದ್ಯಾರ್ಥಿಗಳು ಮನವಿ ಮಾಡಿದಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಕಾಲೇಜಿನ ಕಾರ್ಯಕ್ರಮದಲ್ಲೂ ಈ ಬಗ್ಗೆ ಅನೇಕ ಬಾರಿ ಭರವಸೆ ನೀಡಿದ್ದರು. ಆದರೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಪಟ್ಟಣದಲ್ಲಿಲ್ಲ ಹಾಸ್ಟೆಲ್ ಸೌಲಭ್ಯ
ಪಟ್ಟಣದಲ್ಲಿ ಬಿಸಿಎಂ, ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯ ಇಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಡು ಬಿಸಿಲಲ್ಲಿ ಬಸ್ ಮೂಲಕ ನಿತ್ಯ ಸಂಚರಿಸುವ ಅನಿವಾರ್ಯತೆ ಇದೆ. ಕೆಲ ಗ್ರಾಮಕ್ಕೆ ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಸಂಜೆ ತನಕ ನಿಲ್ದಾಣದಲ್ಲೇ ಕಾಯಬೇಕಿದೆ.
ಸಿದ್ದಮ್ಮನಹಳ್ಳಿ, ಕುಡುತಿನಿ ಬಸ್ ಕಾಲೇಜು ಬಳಿ ನಿಲ್ಲಿಸುವುದಿಲ್ಲ. ಬಿರು ಬಿಸಿಲಿನಲ್ಲಿ ನಡೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಅನಾರೋಗ್ಯವಿದ್ದರೆ ನಮ್ಮ ಪಾಡು ಹೇಳತೀರದು. ಈ ಬಗ್ಗೆ ಶಾಸಕರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಾಲಕ ಮತ್ತು ನಿರ್ವಾಹಕರ ಸಂಬಳವನ್ನು ಕಾಲೇಜಿನಿಂದ ಭರಿಸುವುದಾದರೆ ಕಾಲೇಜಿಗೆ ಹೊಸ ಬಸ್ ಕೊಡಿಸುವುದಾಗಿ ತಿಳಿಸಿದ್ದಾರೆ.
ಶಿವು ವಿದ್ಯಾರ್ಥಿ, ಕಲ್ಲುಕಂಬ
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗೆ ಮನವಿ ಮಾಡಲಾಗಿದೆ. ಈವರೆಗೂ ಬಸ್ ವ್ಯವಸ್ಥೆ ದೊರೆತಿಲ್ಲ. ಮುಂದಿನ ದಿನದಲ್ಲಿ ಬಸ್ ವ್ಯವಸ್ಥೆ ದೊರೆಯುವ ಭರವಸೆ ಇದೆ.
ಶಾಂತಲಾ ಪ್ರಾಚಾರ್ಯೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುರುಗೋಡು
ಶಾಸಕರು ಬಸ್, ಚಾಲಕ ಹಾಗೂ ನಿರ್ವಾಹಕರ ವ್ಯವಸ್ಥೆ ಮಾಡಿದರೆ ಕಾಲೇಜಿಗೆ ಬಸ್ ಸಂಚರಿಸಲು ಕ್ರಮವಹಿಸಲಾಗುವುದು. ಅಲ್ಲಿತನಕ ಕಾಲೇಜು ಮಾರ್ಗದಲ್ಲಿ ಸಂಚರಿಸುವ ಸಿದ್ದಮ್ಮನಹಳ್ಳಿ, ಕುಡುತಿನಿ ಬಸ್ ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸಂಚರಿಸಲು ಕ್ರಮ ವಹಿಸಲಾಗುವುದು.
ತಿರುಮಲೇಶ ಡಿಪೋ ಮ್ಯಾನೇಜರ್, ಕುರುಗೋಡು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net